ಬಂಟ್ವಾಳ,ಡಿ. 21 (DaijiworldNews/AK): ಪುದು,ಕೊಡ್ಮಾಣ್,ಕಳ್ಳಿಗೆ, ತುಂದೆ, ಅರ್ಕುಳ ಮತ್ತು ಮೇರಮಜಲು ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು ಕಳೆದ 48ದಿನಗಳಿಂದ ಪ್ರತಿ ಮನೆ ಮನಗಳಲ್ಲಿ ಸಾಮೂಹಿಕ ರಾಮ ಮಂತ್ರ ಪಠನದೊಂದಿಗೆ ಆರಂಭಗೊಂಡ ಶ್ರೀ ರಾಮ ನಾಮ ತಾರಕ ಜಪ ಯಜ್ಞ ಇಂದು ವೇದಮೂರ್ತಿ ಕಶೆಕೊಡಿ ಸೂರ್ಯ ನಾರಾಯಣ ಭಟ್ ನೇತೃತ್ವದಲ್ಲಿ ಯಜ್ಞ ಆರಂಭಗೊಂಡು ಆಗಮಿಸಿದ ಎಲ್ಲಾ ರಾಮ ಭಕ್ತರು 10 ಕುಂಡಗಳಲ್ಲಿ ಕುಟುಂಬ ಸಮೇತರಾಗಿ ಭಕ್ತಿ ಭಾವದಿಂದ ಹವಿಸ್ಸು ಅರ್ಪಿಸುವ ಮೂಲಕ ಪೂರ್ಣಾಹುತಿಗೊಂಡು ಮಂಗಳಾರತಿಯೊಂದಿಗೆ ಯಾಗ ಸಂಪನ್ನಗೊಂಡಿತು.

ಬೆಳಿಗ್ಗೆ 6ಗಂಟೆಗೆ ಯಾಗ ಸ್ಥಳದಲ್ಲಿ ಗಣಪತಿ ಹೋಮ ನಡೆದು ಬಳಿಕ ಧ್ವಜಾರೋಹಣ ಹಾಗೂ ಗೋ ಪೂಜೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ ನೆರವೇರಿಸಿದರು.
ಬಳಿಕ ನಡೆದ ಸುಧರ್ಮ ಸಭೆಯಲ್ಲಿ ಅಖಿಲ ಭಾರತ ಗ್ರಾಮ ವಿಕಾಸ ಟೋಳಿ ಸದಸ್ಯರಾದ ರಮೇಶ್ ಹೊಸು ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಹೋಮ, ಹವನ,ಪೂಜೆಯನ್ನು ನಮ್ಮಸಮಾಜದಲ್ಲಿ ವ್ಯಕ್ತಿಗತ ಸಾಧನೆಗಾಗಿ ಮಾಡುವ ಸಂಪ್ರದಾಯವಿದೆ, ಆದರೆ ಇಲ್ಲಿ ರಾಮ ತಾರಕ ಯಜ್ಞದ ಮೂಲಕ ಸಮಸ್ತ ಸಮಾಜದ ಹಿತಕ್ಕಾಗಿ ಆಯೋಜಿಸರುವುದು ವಿಶೇಷ, ಸಕಲ ಜೀವ ಸಂಕುಲಕ್ಕೋ ಸುಖವನ್ನು ಬಯಸುವ ಧರ್ಮ ಹಿಂದೂ ಧರ್ಮ, ಆದರೆ ನಾವು ಇಂದು ಗುಲಾಮಗಿರಿ ಹಾಗೂ ಇಂಗ್ಲಿಷ್ ವ್ಯಾಮೋಹದಿಂದ ನಮ್ಮ ನೈಜ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದದ ಸಂಗತಿ, ಆದ್ದರಿಂದ ಇಂತಹ ಧಾರ್ಮಿಕ ಆಚರಣೆಗಳು ಹಿಂದೂ ಸಮಾಜದ ಸಂಘಟಿಸಿ, ಜಾಗೃತಿಗೊಳಿಸಿ ನಮ್ಮತನವನ್ನು ಉಳಿಸಿ ಬೆಳೆಸಿ ಸ್ವಾವಲಂಬಿ ಬದುಕಿಗೆ ಹಾಗೂ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವದಾಸ್ ಕೆ ಆರ್ ಕೊಡ್ಮಾಣ್ ಮಾತನಾಡಿ ಪವಿತ್ರ ಜಾಗ ನೆತ್ತರಕೆರೆಯಲ್ಲಿ ಯಾವುದೇ ಭೇದ ಬಾವವಿಲ್ಲದೆ ಎಲ್ಲರನ್ನು ಒಟ್ಟುಗುಡಿಸಿ ಸಾಮೂಹಿಕ ರಾಮ ನಾಮ ಜಪ ಯೋಜಿಸಿದ ಸತ್ಯ ದರ್ಶನ ಮಾಡಿದ ಎಲ್ಲರಿಗೂ ಶ್ರೀ ರಾಮನ ಆಶೀರ್ವಾದವ ಅನುಗ್ರಹವಿರಲಿ ಎಂದು ಹೇಳಿದರು.
ವೇದಿಕೆಯಲ್ಲಿ ಬಂಟ್ವಾಳ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಾಲಕ ಡಾ ಬಾಲಕೃಷ್ಣ, ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಕಾರ್ಯದರ್ಶಿ ಬಿನುತ್ ಕುಮಾರ್, ಕೋಶಾಧಿಕಾರಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು
ಶ್ರೀ ರಾಮ ತಾರಕ ಜಪ ಯಜ್ಞದ ಸಂಯೋಜಕರು ದಾಮೋದರ ನೆತ್ತರಕೆರೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಸಂಯೋಜಕರಾದ ತೇವು ತಾರಾನಾಥ ಕೊಟ್ಟಾರಿ ಧನ್ಯವಾದವಿತ್ತು,
ಮನಿಷಾ ಮಾತಾಜಿ ಹಾಗೂ ಲತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.