ಬೆಳ್ತಂಗಡಿ, ಡಿ. 20 (DaijiworldNews/AA): ಶತಮಾನಗಳಿಂದ ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಮಾಲಿಗೆಬೈಲು ಪ್ರದೇಶದ ಆದಿವಾಸಿ ಮಲೆಕುಡಿಯ 11 ಕುಟುಂಬಗಳಿಗೆ ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸುವ ಅವರ ಬದುಕಿನಲ್ಲಿ ಅಭಿವೃದ್ಧಿಯ ಹೊಸ ಬೆಳಕು ಚೆಲ್ಲಿತು.




ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಮಾಲಿಗೆ, ಪಂಜಲ ಪ್ರದೇಶವು ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ವಂಚಿತಗೊಂಡ ಪ್ರದೇಶವಾಗಿದೆ. ಇಲ್ಲಿ 11 ಮಲೆಕುಡಿಯ ಕುಟುಂಬಗಳು ಸೇರಿದಂತೆ ಒಟ್ಟು 27 ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಜೀವನ ನಡೆಸುತ್ತಿತ್ತು. ಇದೀಗ ದೀರ್ಘ ಕಾಲದ ಹೋರಾಟದ ಫಲವಾಗಿ ಇಂದು ಬೆಳಕು ಕಾಣುವಂತಾಗಿದೆ.
ವಿದ್ಯುತ್ ಸಂಪರ್ಕಕ್ಕಾಗಿ 2016 ರಲ್ಲಿ ಅಳದಂಗಡಿ ಗ್ರಾಮ ಪಂಚಾಯತ್ ನ ಅಂದಿನ ಅಧ್ಯಕ್ಷ ಸತೀಶ್ ಮಿತ್ತಮಾರ್, ಸದಸ್ಯ ಸತೀಶ್ ಎಸ್. ಎಂ ಮತ್ತು ಅಳದಂಗಡಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಶೇಖರ್ ಕುಕ್ಕೇಡಿರವರು ಅರಣ್ಯ, ಮೆಸ್ಕಾಂ ಇಲಾಖೆಯ ಜೊತೆಗೆ ಜಂಟಿ ಸರ್ವೆ ನಡೆಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರು. ಸುಮಾರು ಮೂರು ವರ್ಷಗಳ ಬಳಿಕ 2019 ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆಯಡಿಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಅನುಮತಿ ದೊರೆಯಿತು. ನಂತರ ಮತ್ತೆ ಅರಣ್ಯ ಹಕ್ಕು ಕಾಯಿದೆಯಡಿ 2019 ರಲ್ಲಿ ಅರ್ಜಿ ಸಲ್ಲಿಸಲಾಯಿತು. ಅಂದಿನ ರಾಜ್ಯ ಸರ್ಕಾರ ಈ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಂತರ 2023 ರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ ಫಲವಾಗಿ ಸರ್ಕಾರ ನಾಲ್ಕು ತಿಂಗಳ ಹಿಂದೆ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಿತು.
170 ವಿದ್ಯುತ್ ಕಂಬ, 2.50 ಕಿಮೀ ಕೇಬಲ್: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ 170 ವಿದ್ಯುತ್ ಕಂಬಗಳನ್ನು ಹಾಕಿ ಕಾಮಗಾರಿ ನಡೆಸಲಾಗಿದೆ. 2.50 ಕಿಮೀ ದೂರ ವಿದ್ಯುತ್ ತಂತಿಯ ಬದಲಾಗಿ ಕೇಬಲ್ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ಕಾಮಗಾರಿಗೆ 75 ಲಕ್ಷ ರೂಪಾಯಿ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು, ಕಾಮಗಾರಿ ಸಂಪೂರ್ಣಗೊಂಡು, ಪರಿಶೀಲನೆ ನಡೆಸಿದ ನಂತರ ಇಂದು ವಿದ್ಯುತ್ ಪೂರೈಕೆ ಮಾಡಲಾಗಿದೆ.
16 ಕುಟುಂಬಗಳಿಗೆ ವಿದ್ಯುತ್ ಪೂರೈಕೆಗೆ ಹಣ ಬಿಡುಗಡೆ ಬಾಕಿ: ಸುಲ್ಕೇರಿಮೊಗ್ರು ಗ್ರಾಮದ ಒಟ್ಟು 27 ಕುಟುಂಬಗಳ ಪೈಕಿ 11 ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕಕ್ಕೆ 75 ಲಕ್ಷ ಬಿಡುಗಡೆಗೊಂಡು ಮೊದಲ ಹಂತದಲ್ಲಿ ವಿದ್ಯುತ್ ಸಂಪರ್ಕ ಮಾಡಲಾಗಿದ್ದು, ಉಳಿದ 16 ಕುಟುಂಬಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅನುದಾನ ಬಿಡುಗಡೆಗೊಳಿಸಲು ರಕ್ಷಿತ್ ಶಿವರಾಂ ರವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಬಿಡುಗಡೆಗೊಂಡ ತಕ್ಷಣ ವಿದ್ಯುತ್ ಕಾಮಗಾರಿ ನಡೆಯಲಿದೆ.
ಶತಮಾನಗಳಿಂದ ವಿದ್ಯುತ್ ವಂಚಿತಗೊಂಡಿದ್ದ ನಮಗೆ ಇಂದು ದೀಪಾವಳಿಯಂತೆ ನಮ್ಮ ಮನೆ ಬೆಳಗಿದ ಸಂತೋಷವಾಗಿದೆ. 2016 ರಿಂದ ನಮ್ಮ ಜೊತೆಗೆ ವಿದ್ಯುತ್ ಸಂಪರ್ಕಕ್ಕಾಗಿ ದುಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಅಳದಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಮಿತ್ತಮಾರ್, ಸದಸ್ಯ ಸತೀಶ್ ಎಸ್. ಎಂ ರವರ ಪ್ರಯತ್ನಿಸಿದ್ದು, ಅವರಿಗೆ ನಾವು ಅಬಾರಿಯಾಗಿದ್ದೇವೆ. ಅರಣ್ಯ, ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ವೆಂಕಪ್ಪ ಮಲೆಕುಡಿಯ ಮಾಳಿಗೆ ತಿಳಿಸಿದ್ದಾರೆ.
ಸುಲ್ಕೇರಿಮೊಗ್ರು ಗ್ರಾಮವನ್ನು ಸಂಪೂರ್ಣ ವಿದ್ಯುತ್ ಸಂಪರ್ಕವಿರುವ ಗ್ರಾಮವನ್ನಾಗಿಸಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಛಲದಿಂದ ನಿರಂತರವಾಗಿ ರಾಜ್ಯ, ಕೇಂದ್ರ ಸರ್ಕಾರದ ಜೊತೆಗೆ ವ್ಯವಹಾರ ನಡೆಸಿದೆವು. ರಕ್ಷಿತ್ ಶಿವರಾಂ, ಶೇಖರ್ ಕುಕ್ಕೇಡಿ ಅವರ ನಿರಂತರ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಇನ್ನೂ ಒಂದೆರಡು ತಿಂಗಳಲ್ಲಿ ಇನ್ನುಳಿದ 16 ಕುಟುಂಬಗಳಿಗೆ ವಿದ್ಯುತ್ ಸಂಪರ್ಕವಾದ ಬಳಿಕ ಚಿಮಿಣಿ ಮುಕ್ತ ಗ್ರಾಮವಾಗಲಿದೆ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಎಸ್. ಎಂ ಹೇಳಿದ್ದಾರೆ.