ಕಾರವಾರ, ಡಿ. 20 (DaijiworldNews/TA): ನಗರದ ರವೀಂದ್ರನಾಥ ಠಾಗೋರ್ ಕಡಲ ತೀರಕ್ಕೆ ವಲಸೆ ಬಂದಿದ್ದ ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ಹೂಗ್ಲಿನ್ ಸೀಗಲ್ ಪಕ್ಷಿ, ಗುರುವಾರ ರಾತ್ರಿ ಮೃತಪಟ್ಟಿದೆ.

ಗಂಭೀರವಾಗಿ ಗಾಯಗೊಂಡಿದ್ದ ಪಕ್ಷಿಗೆ ದಾಂಡೇಲಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗಾಯದ ಪರಿಣಾಮ ಆಹಾರವನ್ನೂ ಸೇವಿಸುತ್ತಿರಲಿಲ್ಲ. ಗಂಭೀರ ಗಾಯ ಹಾಗೂ ಆಹಾರ ಸೇವನೆ ಬಿಟ್ಟ ಕಾರಣ ಹಕ್ಕಿ ಮೃತಪಟ್ಟಿದೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮಂಜು ಹೆಪ್ಪುಗಟ್ಟಿದ ಪ್ರದೇಶದಿಂದ ಚಳಿಗಾಲದಲ್ಲಿ ಉಷ್ಣ ವಲಯದ ಶ್ರೀಲಂಕಾ ಹಾಗೂ ಭಾರತದ ಕರಾವಳಿಗೆ ಸೀಗಲ್ ವಲಸೆ ಬರುತ್ತವೆ. ಹೀಗೆ ಬಂದ ಪಕ್ಷಿಯನ್ನು ಶ್ರೀಲಂಕಾ ಪಕ್ಷಿ ಸಂಶೋಧನ ಸಂಸ್ಥೆಯೊಂದು ಸೆರೆಹಿಡಿದು ಹಕ್ಕಿಯ ಚಲನವಲನ ಸಂಶೋಧನೆಗಾಗಿ ಕಳೆದ ಮಾರ್ಚ್ನಲ್ಲಿ ಉಪಗ್ರಹ ಆಧಾರಿತ ಟ್ಯಾಗಿಂಗ್ ಪರಿಕರ ಅಳವಡಿಸಿತ್ತು.
ಅನಂತರ ಸೈಬೀರಿಯಾದತ್ತ ಪ್ರಯಾಣಿಸಿದ್ದ ಸೀಗಲ್ ಹಕ್ಕಿ ಆರ್ಕ್ಟಿಕ್ವರೆಗೆ ಸಾಗಿ ಅಲ್ಲಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿ ಪುನಃ ಶ್ರೀಲಂಕಾದತ್ತ ಪ್ರಯಾಣಿಸುತ್ತಿತ್ತು. ಮಾರ್ಗ ಮಧ್ಯೆ ಗಾಯಗೊಂಡ ಕಾರಣ ಕಾರವಾರದ ಬೀಚ್ನಲ್ಲಿ ಹಾರಾಟ ಸ್ಥಗಿತಗೊಳಿಸಿತ್ತು ಎಂದು ಕೊಲಂಬೋದ ಸಂಸ್ಥೆ ತಿಳಿಸಿದೆ.