ಮಂಗಳೂರು, ಡಿ. 14 (DaijiworldNews/AA): ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಅನ್ಯ ಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಜಪೆ ಠಾಣಾ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಉಳಾಯಿಬೆಟ್ಟು, ಕೊಟ್ಟಾನ ಹೌಸ್ ನ ಪ್ರಸ್ತುತ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು, ಸಜಿಪಮುನ್ನೂರು ಗ್ರಾಮದ ಸೌದಿ ಅರೆಬಿಯಾದಲ್ಲಿರುವ ಅಬ್ದುಲ್ ಖಾದರ್ ನೇಹಾದ್ (27) ಆರೋಪಿಯಾಗಿರುತ್ತಾನೆ.
ಇದೇ ಅಕ್ಟೋಬರ್ 11ರಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ _sdpi_2025_ID ಎಂಬ ಖಾತೆಯಲ್ಲಿ ಅನ್ಯ ಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದಲ್ಲಿ ತಾಂತ್ರಿಕ ವಿಧಾನದ ಮೂಲಕ ತನಿಖೆ ನಡೆಸಿದಾಗ ಇನಸ್ವಾಗ್ರಾಮ್ ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ವ್ಯಕ್ತಿ ಮಂಗಳೂರು ಮೂಲದ ಸೌದಿ ಅರೆಬಿಯಾದಲ್ಲಿರುವ ಅಬ್ದುಲ್ ಖಾದರ್ ನೇಹಾದ್ ಎಂದು ತಿಳಿದುಬಂದಿರುತ್ತದೆ.
ಆರೋಪಿ ಅಬ್ದುಲ್ ಖಾದರ್ ನೇಹಾದ್ ವಿರುದ್ಧ LOC ಹೊರಡಿಸಲಾಗಿರುತ್ತದೆ. ಡಿ. 14ರಂದು ಕೇರಳ ರಾಜ್ಯದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸಿದ್ದ ಆರೋಪಿ ಅಬ್ದುಲ್ ಖಾದರ್ ನೇಹಾದ್ ನನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು.