ಮಂಗಳೂರು, ಡಿ. 14 (DaijiworldNews/AA): ತಲ್ವಾರ್ ಹಿಡಿದು ನೃತ್ಯ ಮಾಡಿದ ರೀಲ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಶೇರ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಬಂದರು ಜೆ.ಡಮ್ ರೋಡ್ ಅಮೀನ್ ಉಲ್ಲಾ 1 ನೇ ಮಹಡಿ ನಿವಾಸಿ ಅಮೀರ್ ಸುಹೇಲ್ (28) ಹಾಗೂ ಮಂಗಳೂರು, ಕಾವೂರಿನ ಉರುಂದಾಡಿಗುಡ್ಡೆ ಧನುಷ್ ಗೌಂಡ್ ಬಳಿ ನಿವಾಸಿ ಸುರೇಶ (29) ಬಂಧಿತ ಆರೋಪಿಗಳು.
ಡಿ.13 ರಂದು ಸಾಮಾಜಿಕ ಜಾಲತಾಣ ಫೇಸ್ಬುಕ್ ಖಾತೆಯಲ್ಲಿ "Suresh Psy" ಎಂಬ ಹೆಸರಿನ ಖಾತೆ ಹೊಂದಿರುವ ಸುರೇಶ ಎಂಬುವನು ತನ್ನ ಫೇಸ್ಬುಕ್ ಖಾತೆಯಲ್ಲಿ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ VIBES ಮತ್ತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಲಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಅಮೀರ್ ಸುಹೇಲ್ ಹಾಗೂ ಸುರೇಶ ಎಂಬುವವನ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ188/2025 ಕಲಂ. 352(2) ಭಾರತೀಯ ನ್ಯಾಯ ಸಂಹಿತೆ 2023 ಜೊತೆಗೆ 4, 25(1ಬಿ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ 66 ಐ.ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಡಿ. 13ರಂದು ಈ ಪ್ರಕರಣದಲ್ಲಿ ಒಳಗೊಂಡಿರುವ ಇಬ್ಬರು ಆರೋಪಿಗಳನ್ನು ಅವರು ರೀಲ್ಸ್ ಮಾಡಲು ಬಳಸಿದ ತಲ್ವಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್ ಗಳ ಸಹಿತ ದಸ್ತಗಿರಿ ಮಾಡಲಾಗಿರುತ್ತದೆ.
ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಂತೆ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು ಅವರು, ಪೊಲೀಸ್ ಉಪನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ, ರಿಯಾಜ್ ಅವರು ಆರೋಪಿಗಳನ್ನು ಪತ್ತೆಮಾಡಿ ದಸ್ತಗಿರಿ ಮಾಡಿದ್ದಾರೆ.