ಮಂಗಳೂರು, ಡಿ. 14 (DaijiworldNews/AA): ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ, ನೀರಾವರಿ ಪಂಪ್ಸೆಟ್ಗಳನ್ನು ಹೊರತುಪಡಿಸಿ ರಾಜ್ಯದಾದ್ಯಂತ ಎಲ್ಲಾ ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ತಿಳಿಸಿದೆ.

ಸ್ಮಾರ್ಟ್ ಮೀಟರ್ಗಳಿಗೆ ಹೆಚ್ಚುವರಿ ಸ್ಥಳಾವಕಾಶ ಬೇಕಾಗುತ್ತದೆ ಮತ್ತು ಅವುಗಳ ವೆಚ್ಚ ಹೆಚ್ಚಿರುತ್ತದೆ ಎಂಬ ಗ್ರಾಹಕರು ಮತ್ತು ಗುತ್ತಿಗೆದಾರರ ಕಳವಳಗಳ ಕುರಿತಾದ ವರದಿಗಳ ಹಿನ್ನೆಲೆಯಲ್ಲಿ ಮೆಸ್ಕಾಂ ಈ ಸ್ಪಷ್ಟನೆ ನೀಡಿದೆ.
ವಿದ್ಯುತ್ ಸರಬರಾಜು ಸಂಸ್ಥೆಯು, ಈ ಆದೇಶದ ಪ್ರಕಾರ, ಜನವರಿ 1, 2026 ಅಥವಾ ನಂತರ ಪಡೆಯುವ ಎಲ್ಲಾ ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸಲಾಗುವುದು ಎಂದು ಹೇಳಿದೆ. ಸ್ಮಾರ್ಟ್ ಮೀಟರ್ಗಳನ್ನು ಕೇವಲ ಹೊಸ ಸಂಪರ್ಕಗಳಿಗೆ ಅಳವಡಿಸುವುದರಿಂದ, ಅವುಗಳ ಅಳವಡಿಕೆಗೆ ಪ್ರತ್ಯೇಕವಾಗಿ ಹೆಚ್ಚಿನ ಸ್ಥಳ ಒದಗಿಸುವ ಅಗತ್ಯವಿಲ್ಲ. ಜನವರಿ 1, 2026 ರಿಂದ ಸ್ಮಾರ್ಟ್ ಮೀಟರ್ ಅಳವಡಿಸಲು ಪ್ರಾರಂಭಿಸುವುದರಿಂದ, ಗ್ರಾಹಕರು ಮತ್ತು ಗುತ್ತಿಗೆದಾರರು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಾಕಷ್ಟು ಸಮಯಾವಕಾಶ ಲಭ್ಯವಿದೆ.
ಹಾಲಿ ಇರುವ ವಿದ್ಯುತ್ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಲ್ಲ ಎಂದೂ ಮೆಸ್ಕಾಂ ಸ್ಪಷ್ಟಪಡಿಸಿದೆ. ಆದ್ದರಿಂದ, ಗ್ರಾಹಕರು ಮತ್ತು ಗುತ್ತಿಗೆದಾರರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.