ಉಡುಪಿ, ಡಿ. 14 (DaijiworldNews/TA): ರಾಜ್ಯದ ಎಲ್ಲಾ 224 ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಮಾತನಾಡುವ ಹಕ್ಕಿದೆ. ಕೆಲವೊಂದು ಸಂದರ್ಭದಲ್ಲಿ ಚರ್ಚೆ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಉಡುಪಿ ಕ್ಷೇತ್ರದ ಬಗ್ಗೆ ಹಾಗೂ ಪರ್ಯಾಯಕ್ಕೆ ಅನುದಾನ ನೀಡುವ ಬಗ್ಗೆ ಚುಕ್ಕಿ ಗುರುತಿನಲ್ಲಿ ಅವಕಾಶ ಲಭಿಸಿತ್ತು ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಯಶ್ಪಾಲ್ ಮಾತನಾಡುವ ವೇಳೆ ಸ್ಪೀಕರ್ ಖಾದರ್ ಸಿಟ್ಟುಗೊಂಡ ಬಗ್ಗೆ ಶಾಸಕ ಯಶ್ಪಾಲ್ ಪ್ರತಿಕ್ರಿಯೆ ನೀಡಿದರು. ಉಡುಪಿಯಲ್ಲಿ ಮಾತನಾಡಿದ ಅವರು, 15 ದಿನ ಮುಂಚಿತವಾಗಿ ನಾನು ಪ್ರಶ್ನೆ ಕಳುಹಿಸಿದ್ದೆ. ಉಡುಪಿಯ ಪರ್ಯಾಯಕ್ಕೆ ಅನುದಾನ ಕೋರಿ ನಾನು ಪ್ರಶ್ನೆ ಕೇಳಿದ್ದೆ. ಪೀಠಕ್ಕೆ ಗೌರವ ಕೊಟ್ಟು ನಾನು ಸುಮ್ಮನಿದ್ದೇನೆ. ಸ್ಪೀಕರ್ ಖಾದರ್ ಅವರು ಹಗುರವಾಗಿ ಮಾತನಾಡಿದರು.
ನಾನು ಯಾವತ್ತೂ ದಾರಿ ತಪ್ಪುವ ಚರ್ಚೆ ಮಾಡಿಲ್ಲ. ಅನೇಕ ಶಾಸಕರು ಒಂದೊಂದು ಗಂಟೆ ಮಾತನಾಡುತ್ತಾರೆ. ಸ್ಪೀಕರ್ ಖಾದರ್ ಹಿಂದೂ ಧರ್ಮದ ಹರಿಕಥೆ ಕುರಿತು ಹಗುರವಾಗಿ ಮಾತನಾಡಿದರು. ನಾನು ಯಾವತ್ತೂ ದಾರಿ ತಪ್ಪುವ ಚರ್ಚೆ ಮಾಡಿಲ್ಲ. ಇಲ್ಲಿಯ ಅಭಿವೃದ್ಧಿ, ಪರ್ಯಾಯ ಮಹೋತ್ಸವದ ವಿಚಾರ ಬಂದಾಗ ಟೀಕಿಸಿದ್ದಾರೆ. ಅವರ ಪೀಠಕ್ಕೆ ನಾನು ಗೌರವ ಕೊಡುತ್ತೇನೆ. ಆ ಪೀಠದ ಗೌರವ ಉಳಿಸಿಕೊಳ್ಳುವ ಕೆಲಸ ಅಧ್ಯಕ್ಷರು ಮಾಡಬೇಕು. ಚಳಿಗಾಲದ ಅಧಿವೇಶನದಲ್ಲಿ ಯಾರಿಗೆ ಚಳಿ ಬಿಡಿಸಬೇಕೆಂದು ಗೊತ್ತು ಎಂದು ಯಶ್ಪಾಲ್ ತಿಳಿಸಿದರು.