ಉಡುಪಿ, ಡಿ. 13 (DaijiworldNews/TA): ಶಾಂತಿಯ ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದು ಸಂವಾದ. ಸಂವಹನ ಮುರಿದುಬಿದ್ದಾಗಲೇ ಸಂಘರ್ಷಗಳು ಉದ್ಭವಿಸುತ್ತವೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಸಯ್ಯದ್ ಅಬ್ದುಲ್ ನಜೀರ್ ಹೇಳಿದರು.

ಅವರು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ವಿಶ್ವ ಶಾಂತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಆಧ್ಯಾತ್ಮಿಕ ಜ್ಞಾನ ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ದೀರ್ಘಕಾಲದಿಂದಲೇ ಪ್ರಕಾಶಿಸುತ್ತಿರುವ ಪವಿತ್ರ ಶ್ರೀಕೃಷ್ಣ ಮಠಕ್ಕೆ ಆಗಮಿಸಿರುವುದು ನನಗೆ ಅಪಾರ ಗೌರವ. ಶಾಂತಿ ಎಂದರೆ ಕೇವಲ ಸಂಘರ್ಷದ ಅಭಾವವಲ್ಲ ಪರಸ್ಪರ ಅರ್ಥಮಾಡಿಕೊಳ್ಳುವಿಕೆಯ ಸಾನಿಧ್ಯ ಎಂದರು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ವಿಶ್ವ ಶಾಂತಿ ಸಮಾವೇಶವನ್ನು ಜಾಗತಿಕ ಶಾಂತಿಯ ಸಂದೇಶವನ್ನು ಹರಡುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು. ಮುಖ್ಯ ಕಾರ್ಯದರ್ಶಿ ಹಾಗೂ ಜಾಗತಿಕ ಶಾಂತಿ ನಾಯಕ ಡಾ. ವಿಲಿಯಂ ಎಫ್. ವೈಡಲ್ ಸಮಾವೇಶದಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಮುನ್ನ ರಾಜ್ಯಪಾಲ ಸಯ್ಯದ್ ಅಬ್ದುಲ್ ನಜೀರ್ ಅವರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಬಳಿಕ ರಾಜಾಂಗಣ ವೇದಿಕೆಗೆ ಆಗಮಿಸಿದರು.
ಕಾರ್ಯಕ್ರಮದ ವೇಳೆ ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕಿರಿಯ ಪೀಠಾಧಿಪತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ; ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಸಂಸ್ಥಾಪಕ ಹಾಗೂ ಸತ್ಯಸಾಯಿ ಯುನಿವರ್ಸಿಟಿ ಆಫ್ ಹ್ಯೂಮನ್ ಎಕ್ಸಲೆನ್ಸ್ ನ ಸ್ಥಾಪಕ ಕುಲಪತಿ ಸದ್ಗುರು ಮಧುಸೂದನ್ ಸಾಯಿ, ವಿ.ವಿ. ಕುಲಪತಿ ಬಿ.ಎನ್. ನರಸಿಂಹ ಮೂರ್ತಿ, ಸುರೇಶ್ ಪುತ್ತಿಗೆ, ಕವಿತಾ ಪಾಲಿಮಾರ್, ಪ್ರೊಫೆಸರ್ ಚೂಡಾಮಣಿ ನಾಗ್ಗೋಪಾಲ್, ಅರುಣಾ ಕೆ.ಆರ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.