ಮಂಗಳೂರು : 30 ವರ್ಷದ ಬಳಿಕ ಸೇಂಟ್ ಅಲೋಶಿಯಸ್ ಸಂಜೆ ಕಾಲೇಜು ಬಿಕಾಂ1995 ಬ್ಯಾಚ್ನ ಪುನರ್ಮಿಲನ
Sat, Dec 13 2025 01:09:30 PM
ಮಂಗಳೂರು, ಡಿ. 13 (DaijiworldNews/TA): 30ನೇ ವರ್ಷದ ಬಳಿಕ ಸೇಂಟ್ ಅಲೋಶಿಯಸ್ ಸಂಜೆ ಕಾಲೇಜಿನ ಬಿಕಾಂ 1995 ಬ್ಯಾಚ್ನ ಪುನರ್ಮಿಲನ ಸಮಾರಂಭವು ಡಿಸೆಂಬರ್ 12ರಂದು ಮಂಗಳೂರಿನ ಎಜೆ ಗ್ರ್ಯಾಂಡ್ ಹೋಟೆಲ್ನ ಪ್ಲಾಟಿನಂ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಿತು. ಪದವಿ ಪಡೆದ ಮೂರು ದಶಕಗಳ ನಂತರ ಹಳೆಯ ವಿದ್ಯಾರ್ಥಿಗಳು ಮತ್ತೆ ಒಂದೇ ವೇದಿಕೆಯಲ್ಲಿ ಭೇಟಿಯಾದ ಈ ಸಂದರ್ಭ ನೆನಪುಗಳ ಸವಿ ಸ್ನೇಹ ಮತ್ತು ಸಂತೋಷ, ಕೃತಜ್ಞತೆಯೊಂದಿಗೆ ಸ್ಮರಣೀಯವಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಮಾಜಿ ಅಧ್ಯಕ್ಷ ಜಯೇಶ್ ಸ್ವಾಗತ ಭಾಷಣ ಮಾಡಿದರು. ಹಳೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯನ್ನು ಅವರು ಸಂತೋಷದಿಂದ ಸ್ಮರಿಸಿದರು. ಪುನರ್ಮಿಲನದ ವೇಳೆ ಹಳೆಯ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ಅನುಭವಗಳು, ಸ್ಮರಣೀಯ ಕ್ಷಣಗಳು ಹಾಗೂ ಜೀವನ ಪಯಣವನ್ನು ಹಂಚಿಕೊಂಡರು. ಸಂಸ್ಥೆ ಮತ್ತು ಅಧ್ಯಾಪಕರಿಂದ ಪಡೆದ ಮಾರ್ಗದರ್ಶನವೇ ತಮ್ಮ ವೃತ್ತಿಜೀವನದ ಬಲವಾದ ಅಡಿಪಾಯವಾಗಿದೆ ಎಂದು ಅನೇಕರು ಕೃತಜ್ಞತೆಯಿಂದ ಹೇಳಿದರು.
ಮಾಜಿ ಹಾಗೂ ಹಾಲಿ ಅಧ್ಯಾಪಕರು ತಮ್ಮ ಹಳೆಯ ವಿದ್ಯಾರ್ಥಿಗಳನ್ನು ಮತ್ತೆ ಭೇಟಿಯಾದ ಸಂತಸವನ್ನು ವ್ಯಕ್ತಪಡಿಸಿ, ಅವರ ಸಾಧನೆಗಳನ್ನು ಶ್ಲಾಘಿಸಿದರು. ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಶಿಸ್ತುಬದ್ಧರು ಮತ್ತು ಕಲಿಕೆಯಲ್ಲಿ ಉತ್ಸಾಹಭರಿತರಾಗಿದ್ದರು ಎಂದು ಪ್ರೊ. ಡೆನ್ನಿಸ್ ಫೆರ್ನಾಂಡಿಸ್ ಹೇಳಿದರು. ಸಂಜೆ ಕಾಲೇಜಿನಲ್ಲಿ ಬೋಧಿಸಿದ ಅನುಭವವು ತಮ್ಮ ಬೋಧನಾ ಕೌಶಲ್ಯವನ್ನು ಹೆಚ್ಚಿಸಿತು ಎಂದು ಪ್ರೊ. ಮ್ಯಾನುಯೆಲ್ ತೌರೊ ಸ್ಮರಿಸಿದರು. ಪುನರ್ಮಿಲನವನ್ನು ಯಶಸ್ವಿಯಾಗಿ ಆಯೋಜಿಸಿದ ತಂಡದ ಶ್ರಮವನ್ನು ಪ್ರೊ. ಡೊನಾಲ್ಡ್ ಲೋಬೊ ಪ್ರಶಂಸಿಸಿದರು. ಸಂಜೆ ಕಾಲೇಜಿನ ಶಿಕ್ಷಕರು ವಿದ್ಯಾರ್ಥಿ-ಆಧಾರಿತರು ಮತ್ತು ಸಹಾನುಭೂತಿಯುಳ್ಳವರು ಎಂದು ಕಿರಣ್ ವಸಂತ್ ಅಭಿಪ್ರಾಯಪಟ್ಟರು.
ಪ್ರೊ. ಜಯಪಾಲ್ ಮತ್ತು ಪ್ರೊ. ಸಿಲ್ವಿಯಾ , ಗಿರೀಶ್, ದಾಯ್ಜಿವರ್ಲ್ಡ್ ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತೌರೋ, ಗಿರಿ ಪ್ರಸಾದ್ ಅವರ ಉಪಸ್ಥಿತಿಯು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು. ಸಂಜೆ ಕಾಲೇಜಿನ ಬೋಧಕೇತರ ಸಿಬ್ಬಂದಿಯೂ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ ಅಧ್ಯಾಪಕರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು. ಶ್ರೀಕಾಂತ್ ಮತ್ತು ಸುಭಾಷ್ ಕಿಣಿ ಅವರ ಸುಮಧುರ ಗಾಯನವು ಸಭಿಕರನ್ನು ರಂಜಿಸಿ ಹಳೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸಿತು.
ಭರ್ಜರಿ ಭೋಜನ, ನೃತ್ಯ ಹಾಗೂ ಸಂವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಈ ಪುನರ್ಮಿಲನವು ಸಹಪಾಠಿಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿ, ಸಂಸ್ಥೆಯೊಂದಿಗಿನ ಸಂಬಂಧವನ್ನು ಪುನರುಜ್ಜೀವನಗೊಳಿಸಿತು. ಕಾರ್ಯಕ್ರಮದ ಯಶಸ್ಸಿಗೆ ಜಯೇಶ್ ಮತ್ತು ಅವರ ತಂಡದ ಸಮರ್ಪಿತ ಪ್ರಯತ್ನಗಳು ಕಾರಣವಾಗಿದ್ದು, ಭವಿಷ್ಯದಲ್ಲೂ ಇಂತಹ ಭೇಟಿಗಳು ನಡೆಯಲಿ ಎಂಬ ಆಶಯದೊಂದಿಗೆ ಸಮಾರಂಭ ಮುಕ್ತಾಯವಾಯಿತು.