ಕಾಸರಗೋಡು, ಡಿ. 12 (DaijiworldNews/AA): ಕೇರಳದಲ್ಲಿ ನಡೆದಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶ ಶನಿವಾರ ಹೊರ ಬೀಳಲಿದೆ. ಶನಿವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಹೊರ ಬೀಳಲಿದೆ.

ಮತ ಎಣಿಕೆಗೆ 9 ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಗುರುವಾರ ಕಾಸರಗೋಡು ಜಿಲ್ಲೆಯ 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. 74.89 ಶೇಕಡಾ ಮತದಾನವಾಗಿತ್ತು. 11,12,190 ಮತದಾರರಲ್ಲಿ 8,32,894 ಮಂದಿ ಹಕ್ಕು ಚಲಾಯಿಸಿದ್ದರು. ಈ ಪೈಕಿ 3,75,959 ಮಂದಿ ಪುರುಷರು, 4,56,933 ಮಹಿಳೆಯರು ಮತಚಲಾಯಿಸಿದ್ದಾರೆ. ಇಬ್ಬರು ಮಂಗಳ ಮುಖಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಜಿಲ್ಲಾ ಪಂಚಾಯತ್ ನ 16 ಡಿವಿಜನ್, ಆರು ಬ್ಲಾಕ್ ಪಂಚಾಯತ್, 3 ನಗರಸಭೆ ಹಾಗೂ 38 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆದಿತ್ತು. ನಗರಸಭೆಯ 3 ಹಾಗೂ ಬ್ಲಾಕ್ ಪಂಚಾಯತ್ ನ 6 ಕೇಂದ್ರಗಳು ಸೇರಿದಂತೆ ಒಟ್ಟು 9 ಮತ ಎಣಿಕಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.
ಕುಂಬಳೆ ಸರಕಾರಿ ಹಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರಕಾರಿ ಕಾಲೇಜು, ಬೋವಿಕ್ಕಾನ ಹಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ದುರ್ಗಾ ಹಯರ್ ಸೆಕೆಂಡರಿ ಶಾಲೆ, ನೀಲೇಶ್ವರ ರಾಜಾಸ್ ಹಯರ್ ಸೆಕೆಂಡರಿ ಶಾಲೆ, ಪಡನ್ನ ಕ್ಕಾಡ್ ನೆಹರೂ ಕಾಲೇಜು, ಪರಪ್ಪ ಜಿಹೆಚ್ಎಸ್ ಶಾಲೆ, ಹೊಸದುರ್ಗ ಹಯರ್ ಸೆಕೆಂಡರಿ ಶಾಲೆಯಲ್ಲಿ ಎಣಿಕೆ ನಡೆಯಲಿದೆ.
ಮತಯಂತ್ರಗಳನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಎಣಿಕಾ ಕೇಂದ್ರಗಳಲ್ಲಿ ಇಡಲಾಗಿದೆ. ಈ ಬಾರಿ ಅಧಿಕಾರ ಹಿಡಿಯಲು ಎಲ್ಡಿಎಫ್, ಯುಡಿಎಫ್ ಅಲ್ಲದೆ ಬಿಜೆಪಿಯೂ ಪೈಪೋಟಿ ನಡೆಸಿದೆ. ಇದರಿಂದ ನಾಳೆಯ ಫಲಿತಾಂಶ ಕುತೂಹಲ ಕೆರಳಿಸಿದೆ.