ಪುತ್ತೂರು, ಡಿ. 12 (DaijiworldNews/AA): ಗಾಂಧಿ ಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಅರಣ್ಯ ಉತ್ಪನ್ನಗಳ ಖರೀದಿ ಕೇಂದ್ರಕ್ಕೆ ಹಾಡಹಗಲೇ ನುಗ್ಗಿ 5 ಲಕ್ಷ ರೂ. ನಗದು ಮತ್ತು ದಾಖಲೆಗಳು ಹಾಗೂ ಚೆಕ್ಗಳು ಇದ್ದ ಬ್ಯಾಗ್ ಅನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಮೂಡಿಗೆರೆ ನಿವಾಸಿಗಳಾದ ಮುಹಮ್ಮದ್ ಶಹಬಾದ್ (26) ಮತ್ತು ಜಂಶೀದ್ (25) ಎಂದು ಗುರುತಿಸಲಾಗಿದೆ.
ಈ ಇಬ್ಬರನ್ನೂ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ಪೊಲೀಸರು ಅಂಗಡಿಯೊಂದರಿಂದ ಹಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಿದ್ದರು. ಅಲ್ಲಿ ನಡೆಸಿದ ವಿಚಾರಣೆ ವೇಳೆ, ಈ ಜೋಡಿ ಉಪ್ಪಿನಂಗಡಿ ಕಳ್ಳತನವನ್ನೂ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದ್ದು, ನಂತರ ಉಪ್ಪಿನಂಗಡಿ ಪೊಲೀಸರು ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಅಕ್ಟೋಬರ್ 27 ರಂದು ಗಾಂಧಿ ಪಾರ್ಕ್ ಸಮೀಪದ ಶ್ರೀರಾಮ ಗೋಪಾಲ್ ಕಾಮತ್ ವಾಣಿಜ್ಯ ಸಂಕೀರ್ಣದಲ್ಲಿರುವ ವಸಂತ್ ಎಂಬುವವರಿಗೆ ಸೇರಿದ ಅಡಿಕೆ ಮತ್ತು ಅರಣ್ಯ ಉತ್ಪನ್ನಗಳ ವ್ಯಾಪಾರ ಕೇಂದ್ರದಲ್ಲಿ ನಡೆದಿತ್ತು. ಅಂದು ಮಧ್ಯಾಹ್ನ ಅಂಗಡಿ ಮಾಲೀಕರು ನಗದು ಡ್ರಾವರ್ ಅನ್ನು ಲಾಕ್ ಮಾಡಿ ಶಟರ್ ತೆರೆದೇ ಶೌಚಾಲಯಕ್ಕೆ ಹೋಗಿದ್ದರು. ಅವರು ಹಿಂದಿರುಗಿ ಬಂದಾಗ, ನಗದು ಡ್ರಾವರ್ ಒಡೆದು 5 ಲಕ್ಷ ರೂ. ನಗದು ಕಳುವಾಗಿರುವುದು ಕಂಡುಬಂದಿತ್ತು. ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಎನ್. ಆರ್. ಪುರ ಪೊಲೀಸರಿಂದ ಆರೋಪಿಗಳ ವಶಕ್ಕೆ ಪಡೆದ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜು ನೇತೃತ್ವದ ತಂಡವು, ಅವರನ್ನು ಉಪ್ಪಿನಂಗಡಿಗೆ ಕರೆತಂದು ಸ್ಥಳ ಪರಿಶೀಲನೆ ನಡೆಸಿ, ನಂತರ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದೆ.