ಕಾಸರಗೋಡು, ಡಿ. 11 (DaijiworldNews/AA): ಕೇರಳದಲ್ಲಿ ಸದ್ಯ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಸಂಜೆ 6 ಗಂಟೆ ವರೆಗೆ 73.28 ಪ್ರತಿಶತ ಮತದಾನವಾಗಿದೆ. ಆದರೆ ಸಂಜೆ ಆರು ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯಬೇಕಿದ್ದರೂ ಮತದಾನ ಕೊಂಚ ವಿಳಂಬವಾಗಿ ಅಂತ್ಯಗೊಂಡಿದೆ.

ಕೆಲ ಮತಗಟ್ಟೆಗಳಲ್ಲಿ 6 ಗಂಟೆ ನಂತರವೂ ಸರತಿ ಸಾಲು ಕಂಡುಬಂದಿತ್ತು. ಇನ್ನು 11,12,190 ಮಂದಿಯಲ್ಲಿ 8,14,997 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಮತದಾನದ ಅಧಿಕೃತ ಶೇಕಡಾವಾರು ಪ್ರಮಾಣ ಇನ್ನಷ್ಟೇ ಹೊರಬರಬೇಕಿದೆ. ದೇಲಂಪಾಡಿ ಹಾಗೂ ಕಾಞಂಗಾಡ್ ನಲ್ಲಿ ಕೆಲ ಸಣ್ಣ ಘಟನೆ ಬಿಟ್ಟರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯಿತು.
ಕೆಲವೆಡೆ ನಕಲಿ ಮತದಾನ ನಡೆದ ಬಗ್ಗೆ ಕೂಡ ಆರೋಪಗಳು ಕೇಳಿಬಂದಿದೆ. ಕಾಸರಗೋಡು ಜಿಲ್ಲಾ, ಬ್ಲಾಕ್, ಗ್ರಾಮ ಪಂಚಾಯತ್ ಹಾಗೂ ಮೂರು ನಗರಸಭೆ ಸೇರಿದಂತೆ 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮತದಾನ ನಡೆದಿದೆ. ಡಿ.13 ರಂದು ಫಲಿತಾಂಶ ಹೊರಬೀಳಲಿದೆ.