ಮಂಗಳೂರು, ಡಿ. 11 (DaijiworldNews/AK): ಹಳೆ ಮಂಗಳೂರು ಬಂದರಿನಲ್ಲಿ ಕಾರ್ಗೊ ಮತ್ತು ಕ್ರೂಸ್ ಟರ್ಮಿನಲ್ ಗೆ ಸಂಬಂಧಿತ ಮೂಲ ಸೌಕರ್ಯಗಳೊಂದಿಗೆ ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿಯ ಅಭಿವೃದ್ಧಿಗೆ ಸ್ಥಳೀಯರು, ಮೀನುಗಾರರಿಂದ ಸಹಮತ ವ್ಯಕ್ತವಾಗಿದೆ. ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಮಂಗಳೂರು ಹಳೆ ಬಂದರಿನ ದಕ್ಷಿಣ ವಾರ್ಫ್ನ ಗೋದಾಮಿನಲ್ಲಿ ಪರಿಸರ ಸಾರ್ವಜನಿಕ ಸಭೆ ನಡೆಯಿತು.

ಈ ವೇಳೆ ಕಸಬಾ ಬೆಂಗ್ರೆ ಜಮಾಅತ್ ಅಧ್ಯಕ್ಷ ಬಿಲಾಲ್ ಮೊಯ್ದಿನ್ ಮಾತನಾಡಿ, ಇಲ್ಲಿ 30,000 ಜನಸಂಖ್ಯೆ ಇದ್ದು, ಮೀನಿನ ವ್ಯಾಪಾರಿಗಳು, ಮೀನು ಹಿಡಿಯುವವರು, ಕೂಲಿ ಕಾರ್ಮಿಕರು ಸೇರಿದಂತೆ ಶಾಲೆ ಕಾಲೇಜಿಗೆ ಹೋಗುವ ಮಕ್ಕಳಿದ್ದಾರೆ. ಆದರೆ, ಯಾವುದೇ ಯೋಜನೆಗೆ ಮುಂಚಿತವಾಗಿ ಸ್ಥಳೀಯರಿಗೆ, ಮೀನುಗಾರರಿಗೆ ಮಾಹಿತಿಯನ್ನು ಸೂಕ್ತ ರೀತಿಯಲ್ಲಿ ನೀಡುವುದಿಲ್ಲ. ಅಭಿವೃದ್ಧಿಗೆ ನಮ್ಮ ಅಭ್ಯಂತರ ಇಲ್ಲ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿ ಜನಸಾಮಾನ್ಯರ ಸಂಪರ್ಕ ಸೇತುವಾದ ಫೆರ್ರಿಯನ್ನು 300 ಮೀಟರ್ನಂತೆ ದೂರಕ್ಕೆ ತಳ್ಳುತ್ತಾ ಹೋದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಹೇಗೆ ಎಂದು ಪ್ರಶ್ನಿಸಿದರು.
ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿ ಅಭಿವೃದ್ಧಿ ಕಾಮಗಾರಿಗೆ 2 ವರ್ಷಗಳ ಹಿಂದೆಯೇ ಅನುಮೋದನೆ ದೊರಕಿದೆ. ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳು ವಿಳಂಬ ಆಗುತ್ತಿರುವುದೇಕೆ ಎಂದು ಟ್ರಾಲ್ ಬೋಟ್ ಅಸೋಸಿಯೇಶನ್ ಅಧ್ಯಕ್ಷ ಚೇತನ್ ಬೆಂಗ್ರೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಈ ಹಿಂದೆ ನಡೆದ ಸಭೆಯಲ್ಲಿ ಈ ಬಗ್ಗೆ ನೀವು ಈ ಪ್ರಸ್ತಾವಿಸಿದ್ದರಿಂದಲೇ ಈ ವಿಷಯ ಗೊತ್ತಾಗಿರುವುದು. ಇನ್ನು ಪ್ರಕ್ರಿಯೆಗಳು ವೇಗ ಪಡೆಯಲಿದೆ ಎಂದರು.