ಕಾಸರಗೋಡು, ಡಿ. 10 (DaijiworldNews/AA): ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಗುರುವಾರ(ನಾಳೆ) ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ. 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಜಿಲ್ಲೆಯ 38 ಗ್ರಾಮ ಪಂಚಾಯತ್ ಗಳು, ಮೂರು ನಗರಸಭೆ, ಆರು ಬ್ಲಾಕ್ ಪಂಚಾಯತ್ ಹಾಗೂ ಒಂದು ಜಿಲ್ಲಾ ಪಂಚಾಯತ್ ಸೇರಿದಂತೆ ೪೮ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.
ಗ್ರಾಮ ಪಂಚಾಯತ್ ಗಳ 725 ವಾರ್ಡ್ ಗಳಿಗೆ ಒಟ್ಟು 1,242 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ನಗರಸಭೆಗಳ 120 ವಾರ್ಡ್ ಗಳಿಗೆ 128 ಮತಗಟ್ಟೆಗಳು ಸೇರಿದಂತೆ ಒಟ್ಟು 1,370 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಬ್ಲಾಕ್ ಪಂಚಾಯತ್ ಗಳ 92 ಡಿವಿಜನ್ ಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ನ 18 ವಾರ್ಡ್ ಗಳು ಸೇರಿದಂತೆ 955 ವಾರ್ಡ್ ಗಳಿಗೆ ಮತದಾನ ನಡೆಯಲಿದೆ.
ಜಿಲ್ಲೆಯಲ್ಲಿ 11,12,190 ಮತದಾರರಿದ್ದಾರೆ. ಈ ಪೈಕಿ 5,24,022 ಪುರುಷರು ಹಾಗೂ 5,88,156 ಮಹಿಳಾ ಮತದಾರರಿದ್ದಾರೆ. 12 ಮಂಗಳಮುಖಿಯರು, 129 ಅನಿವಾಸಿ ಭಾರತೀಯ ಮತದಾರರು ಒಳಗೊಂಡಿದ್ದಾರೆ. ಮತದಾನಕ್ಕಾಗಿ ಒಟ್ಟು 1370 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.
ಮತಯಂತ್ರ ಸೇರಿದಂತೆ ಚುನಾವಣಾ ಸಾಮಾಗ್ರಿಗಳ ವಿತರಣೆಗೆ ಆರು ಬ್ಲಾಕ್ ಪಂಚಾಯತ್ ಹಾಗೂ ಮೂರು ನಗರಸಭಾ ಮಟ್ಟದಲ್ಲಿ ಮೂರು ಸೇರಿದಂತೆ 9 ಕೇಂದ್ರಗಳನ್ನು ವ್ಯವಸ್ಥೆ ಗೊಳಿಸಲಾಗಿದೆ. ಮತಯಂತ್ರ ಹಾಗೂ ಸಾಮಾಗ್ರಿಗಳನ್ನು ಡಿ.11ರ ಬೆಳಿಗ್ಗೆ 10 ರಿಂದ ವಿತರಿಸಲಾಗುವುದು. ಮಧ್ಯಾಹ್ನ 12 ಗಂಟೆ ಯೊಳಗೆ ಪೂರ್ಣಗೊಳ್ಳಲಿದೆ.
ಡಿ.11 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ
119 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ಇನ್ನು ಚುನಾವಣಾ ಕರ್ತವ್ಯಕ್ಕೆ 6,584 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
2,855 ಅಭ್ಯರ್ಥಿಗಳು
ಜಿಲ್ಲೆಯಲ್ಲಿ 2,855 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 1312 ಪುರುಷರು, 1,473 ಮಂದಿ ಮಹಿಳೆಯರು ಒಳಗೊಂಡಿದ್ದಾರೆ. ಜಿಲ್ಲಾ ಪಂಚಾಯತ್ ನ 18 ಡಿವಿಜನ್ ಗಳಿಗೆ 62 ಅಭ್ಯರ್ಥಿಗಳು, ಆರು ಬ್ಲಾಕ್ ಪಂಚಾಯತ್ ಗಳಿಗೆ 293 ಅಭ್ಯರ್ಥಿಗಳು, 38 ಗ್ರಾಮ ಪಂಚಾಯತ್ ಗಳಿಗೆ 2,167 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೂರು ನಗರಸಭೆಗಳಿಗೆ 333 ಅಭ್ಯರ್ಥಿಗಳು ಕಣದಲ್ಲಿದ್ದಾರೆ.