ಮಂಗಳೂರು, ಡಿ. 10 (DaijiworldNews/TA): ಪ್ರಮುಖ ವಾಣಿಜ್ಯ ಪ್ರದೇಶ ಕಂಕನಾಡಿಯಲ್ಲಿ 41.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಮಾರುಕಟ್ಟೆ ಕಾಮಗಾರಿ ಬಹುತೇಕ ಸ್ಥಗಿತಗೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ. ಆದಾಯ ಖೋತಾವಾಗುತ್ತಿದೆ. ನಾಲ್ಕು ವರ್ಷದ ಹಿಂದೆ 14 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಿದ್ದ ಉರ್ವ ಮಾರ್ಕೆಟ್ ಖಾಲಿ ಬಿದ್ದಿದೆ.


ಕಳೆದ ತಿಂಗಳು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲಿಸಿದಾಗ, ಮತ್ತೆ ಎರಡು ಕೋಟಿ ರೂ. ಬೇಕೆಂದು ಅಧಿಕಾರಿಗಳು ಹೇಳಿದ್ದರು.. ಇಲ್ಲಿ 2019ರ ಫೆ.28ರಂದು ಅಂದಿನ ಉಸ್ತುವಾರಿ ಸಚಿವ ಯು.ಟಿ ಖಾದರ್ ಶಿಲಾನ್ಯಾಸ ಮಾಡಿದ್ದರು. ನಂತರ 41.5 ಕೋಟಿ ರೂ. ಮೊತ್ತದ ಯೋಜನೆಗೆ ಸಂಪುಟದ ಅನುಮೋದನೆ ಪಡೆದು, 2021ರ ಏಪ್ರಿಲ್ನಲ್ಲಿ ನಗರಾಭಿವೃದ್ಧಿ ಇಲಾಖೆ 41.5 ಕೋಟಿ ರೂ. ಮೊತ್ತದ ಯೋಜನೆಗೆ ಮಂಜೂರಾತಿ ನೀಡಿತ್ತು. ಕೆಯುಐಡಿಎಫ್ಸಿ ಸಾಲ ಶೇ.70 ಮತ್ತು ಪಾಲಿಕೆಯ ಶೇ.30 ಅನುದಾನದಲ್ಲಿ ಗುತ್ತಿಗೆದಾರ ಪ್ರಭಾಕರ ಯೆಯ್ಯಾಡಿ ಅವರಿಂದ ಬಿರುಸಾಗಿ ಕಾಮಗಾರಿ ಆರಂಭಗೊಂಡಿದ್ದರೂ ಎರಡು ವರ್ಷಗಳಿಂದ ಕುಂಟುತ್ತಿದೆ.
2022ಕ್ಕೆ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿದ್ದರೂ ಅಮೋಘ ಆರನೇ ವರ್ಷಕ್ಕೆ ತೆರಳುತ್ತಿದೆ.ವ್ಯಾಪಾರಕ್ಕೆ ಪೂರಕವಾಗಿ ಸಾಮಾನ್ಯ ಕಟ್ಟಡ ನಿರ್ಮಿಸಿ ಮುಗಿಸುವ ಅವಕಾಶಗಳಿದ್ದರೂ, 10 ಮಹಡಿಗಳ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ಎಡವಟ್ಟಿಗೆ ಕಾರಣವಾಗಿದೆ. ಕಾಮಗಾರಿ ಮುಗಿಸಿ, ವ್ಯಾಪಾರಕ್ಕೆ ಬಿಟ್ಟು ಕೊಡುವ ಇಚ್ಛಾಶಕ್ತಿಯನ್ನು ಯಾರೂ ತೋರಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವ್ಯಾಪಾರ ಬಲಿಯಾಗುತ್ತಿದೆ. ಕಟ್ಟಡದ ಮುಂಭಾಗದಲ್ಲಿ ಅರ್ಧ ಕಪ್ಪು ಗ್ಲಾಸ್ ಅಳವಡಿಸಿ, ಹೈಟೆಕ್ ಮಾರ್ಕೆಟ್ನಂತೆ ಬಿಂಬಿಸಲಾಗಿದೆ. ತಳ ಅಂತಸ್ತಿನ ಎರಡು ಬೇಸ್ಮೆಂಟ್ಗಳಲ್ಲಿ ದ್ವಿಚಕ್ರ ವಾಹನ, ಕಾರುಗಳ ಪಾರ್ಕಿಂಗ್ಗೆ ಜಾಗ ಬಿಟ್ಟಿದ್ದರೂ, ಕೆಲಸ ನಡೆದಿಲ್ಲ.
ಅಪ್ಪರ್-ಲೋವರ್ ಗೌಂಡ್ ಫೋರ್ನಲ್ಲಿ ಮೀನು, ಮಾಂಸ, ತರಕಾರಿ ಮಾರ್ಕೆಟ್ ಕೂಡ ಸಿದ್ಧಗೊಂಡಿಲ್ಲ. ಮಾರುಕಟ್ಟೆ ಮುಂಭಾಗದ ಮುಖ್ಯ ರಸ್ತೆಯಲ್ಲಿ ಬಸ್ -ನಿಲ್ಲಿಸಲು, ಜನರು ಬಸ್ ಕಾಯಲು ಸರಿಯಾದ ಜಾಗವಿಲ್ಲ. ಹಿಂಬದಿ ತೆರಳುವ ರಸ್ತೆ ಹೊಂಡ ಬಿದ್ದು ವರ್ಷ ಎರಡಾದರೂ ದುರಸ್ತಿ ಮಾಡುತ್ತಿಲ್ಲ. ಖಾಸಗಿ ವಾಣಿಜ್ಯ ಸಂಕೀರ್ಣ ನಿರ್ಮಿಸುವವರು ಕಾಂಕ್ರಿಟ್ ಮಿಶ್ರಣ ತುಂಬಿ ಹೊಂಡ ಮುಚ್ಚಿದ್ದಾರೆ. ಪಾಲಿಕೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರು ಬವಣೆ ಪಡುವಂತಾಗಿದೆ.