ಮಂಗಳೂರು, ಡಿ. 10 (DaijiworldNews/TA): ಜಿಲ್ಲೆಯಲ್ಲಿ ಪ್ರಧಾನ ಅಗ್ನಿಶಾಮಕ ಠಾಣೆಯಾಗಿರುವ ಮಂಗಳೂರಿನ ಪಾಂಡೇಶ್ವರ ಅಗ್ನಿ ಶಾಮಕ ಠಾಣೆಯಲ್ಲಿ ಸಿಬಂದಿಗೆ ವಸತಿ ಗೃಹ ಇಲ್ಲದೆ, ಬಾಡಿಗೆ ಮನೆ ಮಾಡಿ ವಾಸ ಮಾಡಬೇಕಾದ ಪರಿಸ್ಥಿತಿ ಇದೆ.

ಈ ಹಿಂದೆ ಇದ್ದ ವಸತಿ ಗೃಹವನ್ನು ನೆಲಸಮ ಮಾಡಲಾಗಿದ್ದು, ಹೊಸ ವಸತಿ ಗೃಹ ನಿರ್ಮಾಣ ಕಾಮಗಾರಿ ಇನ್ನೂ ಆಗಿಲ್ಲ. ನಗರದಲ್ಲಿ ಜಿ.ಪಂ. ಸೇರಿದಂತೆ ವಿವಿಧ ಸರಕಾರಿ ಇಲಾಖೆಯ ನೌಕರರಿಗೆ, ಪೊಲೀಸ್ ಇಲಾಖೆ ಸಿಬಂದಿಗೆ, ಬಂದೀಖಾನೆ ಇಲಾಖೆ, ರೈಲ್ವೇ ಇಲಾಖೆ ನೌಕರರಿಗೆ ಸೇರಿದಂತೆ ವಿವಿಧ ಇಲಾಖೆಗಳ ಸಿಬಂದಿಗೆ ಅವರದ್ದೇ ಆದ ವಸತಿ ಗೃಹಗಳು ಇವೆ. ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ಕೆಲವು ಇಲಾಖೆಗಳ ಸಿಬಂದಿಗೆ ವಸತಿ ಗೃಹ ಇದ್ದರೂ ವಾಸಿಸುವವರು ಇಲ್ಲ ಎನ್ನುವ ಪರಿಸ್ಥಿತಿ ಇದೆ. ಆದರೆ ತುರ್ತು ಸೇವೆ ವ್ಯಾಪ್ತಿಯಲ್ಲಿ ಬರುವ ಅಗ್ನಿಶಾಮಕ ಠಾಣೆ ಸಿಬಂದಿಗೆ ವಸತಿ ಗೃಹ ಕೊರತೆಯಾಗಿದೆ.
ಇಲಾಖೆ ಸಿಬಂದಿ 24x7 ಸನ್ನದ್ಧವಾಗಿರಬೇಕಾದ ಸ್ಥಿತಿಯಲ್ಲಿ ಇರಬೇಕಾಗಿರುವುದರಿಂದ ಠಾಣೆಯ ಪಕ್ಕದಲ್ಲೇ ವಸತಿ ಗೃಹವೂ ಇರಬೇಕಾಗಿದೆ. ರಾತ್ರಿ ವೇಳೆ ತುರ್ತು ಕರೆ ಬಂದರೆ ಶೀಘ್ರ ತಲುಪುವಲ್ಲಿಯೂ ಸಮಸ್ಯೆಯಾಗುತ್ತದೆ. ಕದ್ರಿ ಸಹಿತ ಇತರ ಠಾಣೆಗಳ ಸಿಬಂದಿಗೆ ಸುಸಜ್ಜಿತ ವಸತಿ ಗೃಹಗಳಿವೆ. ಹಾಗಾಗಿ ಪಾಂಡೇಶ್ವರದಲ್ಲಿಯೂ ವಸತಿ ಗೃಹ ನಿರ್ಮಾಣದ ಅಗತ್ಯವಿದೆ.
ಪಾಂಡೇಶ್ವರದ ಅಗ್ನಿಶಾಮಕ ಠಾಣೆ ಕಚೇರಿಯ ಪಕ್ಕದಲ್ಲೇ ಈ ಹಿಂದೆ ವಸತಿ ಗೃಹ ಇತ್ತು. ನೆಲ ಮತ್ತು ಎರಡು ಅಂತಸ್ತಿನ ವಸತಿ ಸಮುಚ್ಚಯದಲ್ಲಿ 25ಕ್ಕೂ ಅಧಿಕ ಮನೆಗಳಿದ್ದವು. ಸಿಬಂದಿಯವರೂ ವಾಸವಿ ದ್ದರು. ಆದರೆ ಹಳೆಯ ಕಟ್ಟಡವಾಗಿದ್ದ ಕಾರಣ ವಾಸ ಯೋಗ್ಯವಲ್ಲ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ ವರ್ಷದ ಹಿಂದೆ ನೆಲಸಮ ಮಾಡಲಾಗಿತ್ತು. ಆ ಬಳಿಕ ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಇನ್ನು ಈ ಸಂಬಂಧ ಯಾವುದೇ ಹೊಸ ಬೆಳವಣಿಗೆಗಳು ಆಗಿಲ್ಲ. ಸದ್ಯ ವಸತಿ ಸಮುಚ್ಚಯ ಇದ್ದ ಸ್ಥಳ ಖಾಲಿ ಬಿದ್ದಿದೆ.