ಮಂಗಳೂರು, ಡಿ. 08 (DaijiworldNews/TA): ಕಂಕನಾಡಿ ರೈಲ್ವೆ ನಿಲ್ದಾಣದಲ್ಲಿ ಖಾಸಗಿ ಕಾರುಗಳ ಬಾಡಿಗೆ ಸೇವೆ ಒದಗಿಸುವ ಆರೋಪ ವ್ಯಕ್ತವಾಗಿದ್ದು, ಎರಡು ಖಾಸಗಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಚಾಲಕರ ಸಂಘದ ಸದಸ್ಯರು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮತ್ತು ಆರ್ಟಿಓ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಂಕನಾಡಿ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಬಾಡಿಗೆಗೆ ಬಳಸುತ್ತಿದ್ದ ಎರಡೂ ಖಾಸಗಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಎರಡು ವಾಹನಗಳು ಬೆಂಗಳೂರು ಮೂಲದ ಆನ್ಲೈನ್ ಪ್ಲಾಟ್ಫಾರ್ಮ್ ಮುಖಾಂತರ ಬುಕ್ ಆಗಿ, ಪ್ರವಾಸಿಗರನ್ನು ಪಿಕಪ್ ಮಾಡಲು ಬಂದಿದ್ದವು. ಸಂಘದ ಸದಸ್ಯರು ಇದನ್ನು ನಿಯಮ ಉಲ್ಲಂಘನೆಯೆಂದು ಶಂಕಿಸಿ ಆರ್ ಟಿ ಒ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸದ್ಯ ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಟ್ಯಾಕ್ಸಿ ಚಾಲಕರ ಸಂಘ ಆಗ್ರಹಿಸಿದೆ. ಮಂಗಳೂರಿನಲ್ಲಿ ಹಲವು ಪ್ರೈವೇಟ್ ಕಾರುಗಳು ಇದೇ ರೀತಿ ಬಾಡಿಗೆ ಮಾಡುತ್ತಿರುವುದ್ದರಿಂದ ನಿಯಮ ಪಾಲಿಸುವ ನಮಗೆ ಕೆಲಸವೇ ಇಲ್ಲದಂತಾಗಿದೆ ಎಂದು ಸಂಘ ಆರೋಪಿಸಿದೆ.