ಕಾಸರಗೋಡು, ಡಿ. 08 (DaijiworldNews/TA): ಡಿ.11 ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಗೆ ಕಾಸರಗೋಡು ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಂತಿಯುತ ಹಾಗೂ ಸುಗಮ ಮತದಾನಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮತದಾನಕ್ಕಿರುವ ಸಾಮಾಗ್ರಿಗಳನ್ನು ವಿತರಿಸಲು ಹಾಗೂ ಮತ ಎಣಿಕೆಗೆ 9 ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ 436 ಸೂಕ್ಷ್ಮ ಹಾಗೂ 97 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ವಿಜಯ್ ಭರತ್ ರೆಡ್ಡಿ ಹೇಳಿದರು.
ಡಿ.11 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. ಸಂಜೆ 6 ಗಂಟೆ ತನಕ ಸರದಿ ಸಾಲಿನಲ್ಲಿರುವವರಿಗೆ ಅವಧಿ ಮೀರಿದರೂ ಮತದಾನ ಮಾಡಲು ಅವಕಾಶ ನೀಡಲಾಗುವುದು. ಕ್ಯೂ ನಲ್ಲಿರುವವರಿಗೆ ಟೋಕನ್ ನೀಡಲಾಗುವುದು. ಕೆಲ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಿರುವ ಕಾರಣ ಮತದಾನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಚುನಾವಣಾ ಕರ್ತವ್ಯಕ್ಕೆ 6584 ಸಿಬಂದಿಗಳನ್ನು ನೇಮಿಸಲಾಗಿದೆ. ಮಹಿಳಾ ಸಿಬ್ಬಂದಿಗಳಿರುವ 179 ಮತಗಟ್ಟೆ ಗಳು ಇರಲಿವೆ. 119 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.