ಮಂಗಳೂರು, ಡಿ. 08 (DaijiworldNews/TA) : ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಮನೆ–ನಿವೇಶನ ಸೇರಿದಂತೆ ಜನಜೀವನಕ್ಕೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ಡಿ. 8ರಂದು ಸಿಪಿಐ(ಎಂ) ಪಕ್ಷದ ವತಿಯಿಂದ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ ಏರ್ಪಡಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ “ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆಯಡಿ ಸಿಪಿಐ(ಎಂ)ನಿಂದ ಡಿಸೆಂಬರ್ 8ರಂದು ಬೃಹತ್ ಹೋರಾಟ ನಡೆಯಿತು. ಬೆಳಿಗ್ಗೆ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ, ಬಳಿಕ ಕ್ಲಾಕ್ ಟವರ್ ಬಳಿ ಬೆಳಿಗ್ಗೆ 11ಕ್ಕೆ ಬಹಿರಂಗ ಸಭೆ ನಡೆಯಿತು. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳಿಂದ ಹಲವಾರು ಮಂದಿ ಭಾಗವಹಿಸಿದರು. ಜಿಲ್ಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವ್ಯಾಪಾರೀಕರಣ ಹೆಚ್ಚುತ್ತಿರುವುದು, ಮನೆ–ನಿವೇಶನ ಸಮಸ್ಯೆಗಳು, ಉದ್ಯೋಗಾವಕಾಶಗಳ ಕೊರತೆ, ಕೈಗಾರಿಕೆಗಳ ಪರಿಸರ ಮಾಲಿನ್ಯ, ರಸ್ತೆ ಮತ್ತು ಮೂಲಸೌಕರ್ಯ ಸಮಸ್ಯೆಗಳು ಜನಜೀವನವನ್ನು ಕಹಿಗೊಳಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜಿಲ್ಲೆಯಲ್ಲಿ ಸತತವಾಗಿ ಅಧಿಕಾರದಲ್ಲಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದನೆ ಕಡಿಮೆ ಇದೆ ಎಂಬುದು ಸಿಪಿಐ(ಎಂ) ಪಕ್ಷದ ಆರೋಪ. ಜನಜೀವನಕ್ಕೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಈ ಹೋರಾಟ ಆಯೋಜಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ನ ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್, ರವಿಚಂದ್ರ ಕೊಂಚಾಡಿ, ತಯ್ಯೂಬ್ ಬೆಂಗರೆ ಮತ್ತು ರಿಜ್ವಾನ್ ಬೆಂಗರೆ ಉಪಸ್ಥಿತರಿದ್ದರು.