ಮಂಗಳೂರು,ಡಿ. 08 (DaijiworldNews/AK): ಖಾಸಗಿ ಕಾರುಗಳಲ್ಲಿ ಬಾಡಿಗೆ ಮಾಡುತ್ತಿದ್ದ ಎರಡು ಕಾರುಗಳನ್ನು ಸೋಮವಾರ ಕಂಕನಾಡಿ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಮಾಡಿದ ದಕ್ಷಿಣ ಕನ್ನಡ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಪದಾಧಿಕಾರಿಗಳು ಪೊಲೀಸರ ಮೂಲಕ ಆರ್ ಟಿ ಒ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಝೂಮ್ ಕಾರ್ ಆನ್ ಲೈನ್ ಮುಖಾಂತರ ಬೆಂಗಳೂರಿನಿಂದ ಬುಕಿಂಗ್ ಆಗಿ ಪ್ರವಾಸಿಗರನ್ನು ಕಂಕನಾಡಿ ರೈಲ್ವೆ ಸ್ಟೇಷನ್ ನಿಂದ ಪಿಕಪ್ ಮಾಡಲು ಎರಡು ಕಾರುಗಳು ಬಂದಿದ್ದು, ಸಂಘದ ಸದ್ಯರು ವಿಚಾರಣೆ ನಡೆಸಿದಾಗ ಇದು ಕಾನೂನಿಗೆ ವಿರುದ್ಧವಾಗಿ ನಡೆಸುವಂತಹ ಬಾಡಿಗೆಯಾದುದರಿಂದ ಈ ಬಗ್ಗೆ ಆರ್ ಟಿ ಓ ಅಧಿಕಾರಿಗೆ ಕರೆ ಮಾಡಿ ತಿಳಿಸಿದರು. ಆದರೆ ಆರ್ ಟಿ ಒ ಅಧಿಕಾರಿಗಳು ನಮ್ಮಲ್ಲಿ ಸಿಬ್ಬಂದಿಗಳು ಇಲ್ಲ ಎನ್ನುವ ಕಾರಣ ನೀಡಿ ಪೊಲೀಸ್ ಇಲಾಖೆ ಗೆ ದೂರು ನೀಡಲು ತಿಳಿಸಿದರು.
ಬಳಿಕ 112 ಗೆ ಕರೆ ಮಾಡಿ ದೂರು ನೀಡಲಾಗಿ ಪೊಲೀಸ್ ಠಾಣೆಯಿಂದ ಸಂಬಂಧಪಟ್ಟ ಅಧಿಕಾರಿಗಳು ಬಂದು ಈ ಬಾಡಿಗೆ ಮಾಡುವ ಖಾಸಗಿ ಕಾರುಗಳನ್ನು ಅಲ್ಲಿ ಬುಕ್ ಮಾಡಿದಂತಹ ಪ್ರವಾಸಿಗರ ಸಮೇತವಾಗಿ ಠಾಣೆಗೆ ಕರೆದೊಯ್ದರು. ಅದೇ ರೀತಿ ನಮ್ಮ ಸಂಘದ ಪದಾಧಿಕಾರಿಗಳು ಮತ್ತು ಅಲ್ಲಿನ ಸ್ಥಳೀಯ ಸದಸ್ಯರು ಠಾಣೆಗೆ ಲಿಖಿತ ದೂರು ನೀಡಲು ಬಂದಾಗ ವೃತ್ತ ನಿರೀಕ್ಷಕರು ಸರಿಯಾಗಿ ಸ್ಪಂದನೆ ನೀಡಿಲ್ಲ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ನಂತರ ಸಂಘದ ಗೌರವಾಧ್ಯಕ್ಷ ದಿನೇಶ್ ಕುಂಪಲ ಬಂದು ವೃತ್ತ ನಿರೀಕ್ಷಕರೊಂದಿಗೆ, ವಾಸ್ತವಿಕ ಪರಿಸ್ಥಿತಿಯನ್ನು ವಿವರಿಸಿ ನಮ್ಮ ಚಾಲಕರ ಹಕ್ಕು ಮತ್ತು ನಮಗೆ ನ್ಯಾಯವನ್ನು ಒದಗಿಸಿಕೊಡುವಂತೆ ಮನವಿ ಮಾಡಿಕೊಂಡಾಗ, ವೃತ್ತ ನಿರೀಕ್ಷಕರು ಆರ್ ಟಿ ಓ ಅಧಿಕಾರಿಗಳನ್ನು ಠಾಣೆಗೆ ಕರೆಸಿ ಆ ಎರಡು ಕಾರುಗಳನ್ನು ಆರ್ ಟಿ ಒಗೆ ಅಧಿಕಾರಿಗಳ ಸುಪರ್ದಿಗೆ ಹಸ್ತಾಂತರಿಸಿದರು.
ಆರ್ ಟಿ ಓ ಅಧಿಕಾರಿಗಳು ಈ ವಾಹನವನ್ನು ಮುಟ್ಟುಗೋಲು ಹಾಕಿ ದಂಡ ವಿಧಿಸುವ ಭರವಸೆಯನ್ನು ನೀಡಿದ್ದಾರೆ. ಕಾರಿನಲ್ಲಿದ್ದ ಪ್ರವಾಸಿಗರಿಗೆ ವಾಹನದ ವ್ಯವಸ್ಥೆಯನ್ನು ಮಾಡಲಾಯಿತು. ಕಾರ್ಯಾಚರಣೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಹರೀಶ್ ಶೆಟ್ಟಿ ಕುತ್ತಾರು, ಹರಿಶ್ಚಂದ್ರ ಅವರೊಂದಿಗೆ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಬಾಡಿಗೆ ಮಾಡುವಂತ ಖಾಸಗಿ ಕಾರುಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿದ್ದು, ಪ್ರತಿ ಸಲ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇಲಾಖೆಗಳಿಗೆ ನಾವು ಮನವಿಯನ್ನ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಅಧಿಕಾರಿಗಳಿಂದಾಗಲಿ ಅಥವಾ ಸಂಬಂಧಪಟ್ಟ ಇಲಾಖೆಗಳಿಂದಾಗಲಿ ನಮಗೆ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ. ಇಲಾಖೆಗಳು ಈ ಖಾಸಗಿ ಕಾರುಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ, ಬಾಡಿಗೆ ಮಾಡುವಂತ ಖಾಸಗಿ ಕಾರುಗಳನ್ನು ನಾವು ಹಿಡಿದು ಕೊಟ್ಟರೂ, ಅವುಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ, ನಾವುಗಳು ಅದನ್ನು ಹಿಡಿದು ಪೋಲಿಸ್ ಇಲಾಖೆಗೆ ತಂದರೆ ಇಲಾಖೆಯಿಂದ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಇದಕ್ಕೆ ಇಂದಿನ ಈ ವಿಚಾರವೇ ಉದಾಹರಣೆಯಾಗಿರುತ್ತದೆ. ಇಷ್ಟಕ್ಕೂ ಖಾಸಗಿ ಟ್ಯಾಕ್ಸಿಯನ್ನು ಬಾಡಿಗೆಗೆ ಉಪಯೋಗಿಸಿದರೆ, ಎಲ್ಲಿಯಾದರೂ ಅಪಘಾತವಾದರೆ ಪ್ರವಾಸಿಗರಿಗೆ ಯಾವುದೇ ವಿಮೆ ಸಿಗುವುದಿಲ್ಲ. ಅಂತೆಯೇ ಸೆಲ್ಫ್ ಡ್ರೈವ್ ತರಹದ ಜೂಮ್ ಕಾರುಗಳನ್ನು ಬಳಸಬೇಕಾದರೆ ಗ್ರಾಹಕರು ಸ್ವಲ್ಪ ಜಾಗರೂಕರಾಗಿರಬೇಕು ಯಾಕೆಂದರೆ ಜೂಮ್ ಕಾರು ಬಳಸಬೇಕಾದರೆ ಅದಕ್ಕೆ ಅದರದೇ ಆದ ನಿಯಮಗಳಿದ್ದಾವೆ, ಅದರ ಎಲ್ಲಾ ದಾಖಲೆಗಳು ಸರಿಯಾಗಿ ಇರಬೇಕು ಹಾಗೂ ಅದರ ನಂಬರ್ ಪ್ಲೇಟ್ ಕಪ್ಪು ಬೋರ್ಡಲ್ಲಿ ಹಳದಿ ಬಣ್ಣದಲ್ಲಿ ಬರೆದಿರಬೇಕು ಇದರ ದುರುಪಯೋಗ ಪಡೆದುಕೊಂಡು ಸ್ವಂತಕ್ಕೆ ಉಪಯೋಗಿಸುವಂತಹ ವೈಟ್ ಬೋರ್ಡ್ ಐಷಾರಾಮಿ ಕಾರುಗಳನ್ನು ಮನೆಯಲ್ಲಿ ನಿಲ್ಲಿಸುವ ಬದಲು ಅದನ್ನು ಜೂಮ್ ನಂತಹ App ಗಳಿಗೆ ಅಟ್ಯಾಚ್ ಮಾಡಿಕೊಂಡು ಈ ರೀತಿಯಾಗಿ ಬಾಡಿಗೆಯನ್ನು ಮಾಡುತ್ತಾರೆ.
ನಾವು ಸ್ವಉದ್ಯೋಗ ಮಾಡಿಕೊಂಡು ಕೊಂಡಿರುವಂತಹ ಟ್ಯಾಕ್ಸಿ ಚಾಲಕರು ನಮಗೆ ಇರುವಂತಹ ಎಲ್ಲಾ ಮಾನದಂಡಗಳನ್ನು ಪಾಲಿಸಿಕೊಂಡು ಸರಕಾರದ ದುಬಾರಿ ವೆಚ್ಚಗಳನ್ನು, ಸರಕಾರದ ಖಜಾನೆಗೆ ಸಲ್ಲಬೇಕಾದಂತಹ ಮೊತ್ತಗಳನ್ನು ಭರಿಸಿ ನಾವು ದುಡಿಯುತ್ತಿರಬೇಕಾದರೆ, ಸರಕಾರದ ಖಜಾನೆಗೆ ಯಾವುದೇ ಪ್ರಯೋಜನವಾಗದಂತಹ ಇಂತಹ ವೈಟ್ ಬೋರ್ಡ್ ಟ್ಯಾಕ್ಸಿಗಳು ಬಾಡಿಗೆ ಮಾಡಿದಾಗ ಅದನ್ನು ಪ್ರೋತ್ಸಾಹಿಸುವಂತಹ ಇಲಾಖೆಗಳು ನಮ್ಮ ಮೇಲೆ ಸವಾರಿ ಮಾಡುತ್ತಿರುತ್ತವೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಇಂತಹ ಘಟನೆಗಳು ಮರುಕಳಿಸಿದರೆ ನಾವು ನಮ್ಮ ಸಂಘದ ವತಿಯಿಂದ ಉಗ್ರ ಹೋರಾಟವನ್ನು ಮಾಡಬೇಕಾ ಬಹುದು ಎಂದು ದಿನೇಶ್ ಕುಂಪಲ ಎಚ್ಚರಿಸಿದ್ದಾರೆ.