ಉಡುಪಿ, ಡಿ. 08 (DaijiworldNews/AA): ತೀವ್ರ ಅಸ್ವಸ್ಥರಾಗಿದ್ದ ರೋಗಿಯೊಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಸುಮಾರು ಎರಡೂವರೆ ಗಂಟೆಗಳ ಕಾಲ 108 ಆಂಬ್ಯುಲೆನ್ಸ್ ಅಥವಾ ಯಾವುದೇ ಖಾಸಗಿ ಆಂಬ್ಯುಲೆನ್ಸ್ ಸಿಗದ ಕಾರಣ, ಕೊನೆಗೆ ಅವರನ್ನು ಸರಕು ಸಾಗಿಸುವ ಟೆಂಪೋದಲ್ಲಿ ಕರೆದೊಯ್ಯಬೇಕಾದ ಆಘಾತಕಾರಿ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.



ರೋಗಿಯ ಕುಟುಂಬವು ಸಂಜೆ 7:00 ರಿಂದ ರಾತ್ರಿ 9:30 ರವರೆಗೆ 108 ತುರ್ತು ಸೇವೆಗೆ ಪದೇ ಪದೇ ಕರೆ ಮಾಡಿದೆ, ಆದರೆ ಯಾವುದೇ ಆಂಬ್ಯುಲೆನ್ಸ್ ಲಭ್ಯವಿರಲಿಲ್ಲ. ಖಾಸಗಿ ಆಂಬ್ಯುಲೆನ್ಸ್ಗಳನ್ನೂ ಸಹ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ರೋಗಿಯ ಸ್ಥಿತಿ ಹದಗೆಡುತ್ತಿದ್ದರಿಂದ, ಕುಟುಂಬವು ಅಂಬಲಪಾಡಿಯ ವಿಷು ಶೆಟ್ಟಿ ಅವರ ಸಹಾಯವನ್ನು ಕೋರಿತು.
ವಿಷು ಶೆಟ್ಟಿ ಅವರು ಪ್ರಯತ್ನಿಸಿದರೂ, ಅವರಿಗೂ ಆಂಬ್ಯುಲೆನ್ಸ್ ಒದಗಿಸಲು ಸಾಧ್ಯವಾಗಲಿಲ್ಲ. ಬೇರೆ ದಾರಿಯಿಲ್ಲದೆ ಮತ್ತು ರೋಗಿಯ ಆರೋಗ್ಯವು ಮತ್ತಷ್ಟು ಹದಗೆದುತ್ತಿದ್ದ ಕಾರಣ, ವಿಷು ಶೆಟ್ಟಿ ಅವರು ತಮ್ಮ ಸರಕು ಟೆಂಪೋದೊಳಗೆ ಮಂಚವನ್ನು ಇರಿಸಿ, ರೋಗಿಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಘಟನೆಯ ಕುರಿತು ಮಾತನಾಡಿದ ವಿಷು ಶೆಟ್ಟಿ, "ಕಳೆದ ಒಂದು ವರ್ಷದಿಂದ 108 ಆಂಬ್ಯುಲೆನ್ಸ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ನೂರಾರು ರೋಗಿಗಳು ತೊಂದರೆ ಅನುಭವಿಸಿದ್ದಾರೆ. ಈ ಸಮಸ್ಯೆಯನ್ನು ನಾನು ಪದೇ ಪದೇ ಸರ್ಕಾರದ ಗಮನಕ್ಕೆ ತಂದಿದ್ದೇನೆ, ಆದರೆ ಯಾವುದೇ ಬದಲಾವಣೆ ಆಗಿಲ್ಲ. ಈ ಪ್ರಕರಣದಲ್ಲಿಯೂ, ಎರಡೂವರೆ ಗಂಟೆಗಳ ನಂತರವೂ ಯಾವುದೇ ಆಂಬ್ಯುಲೆನ್ಸ್ ಲಭ್ಯವಾಗಲಿಲ್ಲ. ರೋಗಿಯ ಜೀವ ಉಳಿಸಲು ನಾವು ಸರಕು ಟೆಂಪೋ ಬಳಸುವ ಅನಿವಾರ್ಯತೆ ಎದುರಾಯಿತು. ಸರ್ಕಾರ ಮತ್ತು ಜಿಲ್ಲಾಡಳಿತವು ತಕ್ಷಣ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನರ ಜೀವವನ್ನು ನಿರ್ಲಕ್ಷಿಸಲಾಗದು. ಉಡುಪಿ ಜಿಲ್ಲೆಯಲ್ಲಿ 108 ಸೇವೆ ಅಡಿಯಲ್ಲಿ 18 ಆಂಬ್ಯುಲೆನ್ಸ್ಗಳು ಇದ್ದರೂ, ಕೇವಲ ಐದು ಅಥವಾ ಆರು ಮಾತ್ರ ಸಾರ್ವಜನಿಕ ಬಳಕೆಗೆ ಲಭ್ಯವಿದೆ" ಎಂದು ಹೇಳಿದರು.
ಈ ಘಟನೆಯು ಉಡುಪಿ ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಸೇವೆಗಳ ಸ್ಥಿತಿಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಈ ಘಟನೆಯು ತಕ್ಷಣದ ಪರಿಹಾರ ಕ್ರಮಗಳ ಅಗತ್ಯವನ್ನು ಎತ್ತಿ ತೋರಿಸಿದೆ.