ಮಂಗಳೂರು, ಡಿ. 07 (DaijiworldNews/AA): ಮೀನುಗಾರರು ಮೀನುಗಾರಿಕೆಗೆ ಹೋದ ವೇಳೆ ಸಮುದ್ರದಲ್ಲಿ ಅವಘಡಗಳು ಉಂಟಾದಾಗ ಮೀನುಗಾರರ ಜೀವರಕ್ಷಣೆಗೆ ಸಹಾಯವಾಗುವ ಉದ್ದೇಶದಿಂದ ಆರಂಭಿಸಲು ಉದ್ದೇಶಿಸಲಾಗಿರುವ 'ಸೀ ಆ್ಯಂಬುಲೆನ್ಸ್' ವ್ಯವಸ್ಥೆ ಮುಂದಿನ ಮಳೆಗಾಲದ ಒಳಗೆ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಾಂಕಾಳ ಎಸ್. ವೈದ್ಯ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಗಾರರೊಂದಿಗೆ ಮಾತನಾಡಿದ ಅವರು, "ಸೀ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದಾಗಿ ಈಗಾಗಲೇ ಮೀನುಗಾರರಿಗೆ ಭರವಸೆ ನೀಡಲಾಗಿತ್ತು. ಅದರಂತೆ ಬಜೆಟ್ನಲ್ಲಿ ಘೋಷಣೆಗೊಂಡು ಟೆಂಡರ್ ಪ್ರಕ್ರಿಯೆ ಅಂತಿಮವಾಗಿ, ಪ್ರಸ್ತುತ ಚೆನ್ನೈನಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಮುಂದಿನ ಮಳೆಗಾಲದೊಳಗೆ ಸೀ ಆ್ಯಂಬುಲೆನ್ಸ್ ಕಾರ್ಯಾರಂಭ ಮಾಡಲಿದೆ" ಎಂದು ತಿಳಿಸಿದರು.