ಕಾಪು, ಡಿ. 07 (DaijiworldNews/AA): ಕಾಪುವಿನ ಕಟಪಾಡಿ ಕೋಟೆ ಗ್ರಾಮದ ಕಿನ್ನಿಗುಡ್ಡೆ ಪ್ರದೇಶದಲ್ಲಿ ಬೀಗ ಹಾಕಿದ್ದ ಮನೆಯೊಂದರ ಬೀಗ ಮುರಿದು ನಗದು ಮತ್ತು ಚಿನ್ನಾಭರಣ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಿನ್ನಿಗುಡ್ಡೆಯ ದೀಪ ಜ್ಯೋತಿ ಮನೆಯ ಪ್ರಭಾಕರ ಅಮೀನ್ ಅವರು ನವೆಂಬರ್ 26 ರಂದು ತಮ್ಮ ಅಳಿಯನ ಮದುವೆಗೆಂದು ಪತ್ನಿ ಮತ್ತು ಮಗನೊಂದಿಗೆ ಮುಂಬೈಗೆ ತೆರಳಿದ್ದರು. ಡಿಸೆಂಬರ್ 5 ರಂದು ಕುಟುಂಬ ಹಿಂದಿರುಗಿದಾಗ ಕಳ್ಳತನವಾಗಿರುವ ವಿಷಯ ಬೆಳಕಿಗೆ ಬಂದಿದೆ.
ಪ್ರಭಾಕರ ಅಮೀನ್ ಅವರು ಮನೆಗೆ ಮರಳಿ ಬಂದಾಗ, ಬಾಗಿಲಿನ ಬಳಿ ಕತ್ತಿ ಬಿದ್ದಿರುವುದು, ಮನೆ ಬಾಗಿಲು ಹಾನಿಗೀರುವುದು ಮತ್ತು ಅಡುಗೆಮನೆ ಬಳಿಯ ಬಾಗಿಲು ತೆರೆದಿರುವುದು ಕಂಡುಬಂದಿದೆ. ಮನೆಯೊಳಗೆ ಹೋಗಿ ಪರಿಶೀಲಿಸಿದಾಗ, 17,000 ರೂಪಾಯಿ ನಗದು, 1 ಗ್ರಾಂ ತೂಕದ ಚಿನ್ನದ ಮಗುವಿನ ಓಲೆ, ಸ್ವಸ್ತಿಕ್ ಚಿಹ್ನೆಯಿರುವ 1 ಗ್ರಾಂ ಚಿನ್ನದ ಪೆಂಡೆಂಟ್ ಮತ್ತು 2 ಗ್ರಾಂ ಚಿನ್ನದ ಉಂಗುರ ಸೇರಿ ಒಟ್ಟು 20,000 ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ತಿಳಿದುಬಂದಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.