ಮಂಗಳೂರು, ಡಿ. 07 (DaijiworldNews/TA): ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಡಿಸೆಂಬರ್ 06 ರಂದು ಸಂಸ್ಥೆಯ ಕ್ರೀಡಾಂಗಣದಲ್ಲಿ ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳ ಶಿಸ್ತುಬದ್ಧ ಪಥಸಂಚಲನದೊಂದಿಗೆ ಆರಂಭವಾಗಿ ನಂತರ ಕ್ರೀಡಾ ಸಾಧಕರು ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸುವ ಮೂಲಕ ಕ್ರೀಡಾಕೂಟಕ್ಕೆ ಪಾರಂಪರಿಕ ಚಾಲನೆ ನೀಡಿದರು. ಸಂಸ್ಥೆಯ ಆಡಳಿತ ಮಂಡಳಿ, ಅಥಿತಿ ಗಣ್ಯರು, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕಿ ಬಲೂನುಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಬಬಿತಾ ಆರ್. ನಾಥ್ ವಹಿಸಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಶಿವಾನಿ ಆರ್. ನಾಥ್ " ಕ್ರೀಡಸ್ಪರ್ಧೆಯಲ್ಲಿ ಗೆಲುವು ಮಾತ್ರ ಗುರಿಯಾಗಬಾರದು,ಭಾಗವಹಿಸುವುದು, ಪ್ರಯತ್ನಿಸುವುದು, ನಿಮ್ಮೊಳಗಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಕಂಡುಹಿಡಿಯುವುದು, ಇವೇ ನಿಜವಾದ ಕ್ರೀಡಾ ಮೌಲ್ಯಗಳು" ಎಂಬ ಪ್ರೇರಣಾತ್ಮಕ ಮಾತುಗಳೊಂದಿಗೆ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ಗೌರವ ಅತಿಥಿಗಳಾಗಿ ಜಯನಿ ಆರ್. ನಾಥ್, ಉಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ವಸಂತ ಸಲ್ಯಾನ್, ಶ್ರೀ ಪಂಚದುರ್ಗಾ ದೇವಸ್ಥಾನದ ಕಕ್ಯಪದವು ಇದರ ವ್ಯವಸ್ಥಾಪಕರಾದ ಶ್ರೀಯುತ ವೀರೇಂದ್ರ ಜೈನ್, ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಾ ಕೆ, ಸಂಯೋಜಕರಾದ ಯಶವಂತ್ ಜಿ ನಾಯಕ್, ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಜಿ.ಕೆ
ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರೀಡಾಕೂಟದ ಗರಿಮೆಯನ್ನು ಹೆಚ್ಚಿಸಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಜೋಸ್ಟನ್ ಲೋಬೋ ಅಥಿತಿ ಗಣ್ಯರನ್ನು ಸ್ವಾಗತಿಸಿ ಕ್ರೀಡೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಅವಶ್ಯಕ ಎಂದು ತಿಳಿಸಿದರು. ಗೌರವ ಉಪಸ್ಥಿತಿಯಲ್ಲಿ ಶ್ರೀಯುತ ವಸಂತ ಸಲ್ಯಾನ್ "ವಿದ್ಯಾರ್ಥಿಗಳು ಶಿಸ್ತಿನೊಂದಿಗೆ, ಧೈರ್ಯದಿಂದ ಮತ್ತು ನಿರಂತರ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂಬ ಸಂದೇಶದೊಂದಿಗೆ ಶುಭ ಹಾರೈಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಜಿ ಕೆ ಅತಿಥಿಗಣ್ಯರನ್ನು ವಂದಿಸಿದರು.
ಈ ವರ್ಷದ ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ವಿಭಾಗದ ವಿದ್ಯಾರ್ಥಿಗಳಿಂದ ನಡೆದ ವರ್ಣರಂಜಿತ ಕಾರ್ಯಕ್ರಮಗಳು ಕ್ರೀಡಾಂಗಣವನ್ನು ಮನಮೋಹಕಗೊಳಿಸಿತು. ಬಣ್ಣ ಬಣ್ಣದ ಚಿತ್ತಾರಗಳು, ಕಲೆ-ಕ್ರೀಡೆ ಸಂಯೋಜನೆಯ ಪ್ರದರ್ಶನಗಳು ಹಾಗೂ ಸಮೂಹ ಪ್ರದರ್ಶನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ವಿದ್ಯಾರ್ಥಿಗಳಿಗೆ ವಿವಿಧ ವೈಯಕ್ತಿಕ ಹಾಗೂ ಗುಂಪು ಕ್ರೀಡಾ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿ ಪದಕಗಳನ್ನು ನೀಡುವ ಮೂಲಕ ಗೌರವಿಸಲಾಯಿತು.ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆಲ್ಲರಿಗೂ ಸಹಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. ಕಾರ್ಯಕ್ರವನ್ನು ಶಿಕ್ಷಕರಾದ ಸಂಧ್ಯಾ ಹಾಗೂ ಸೌಮ್ಯ ಇವರು ನಿರೂಪಿಸಿದರು. ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಪೋಷಕರ ಸಹಕಾರದಿಂದ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು. ಕಾರ್ಯಕ್ರಮದ ಅಂತ್ಯದಲ್ಲಿ ಶಿಕ್ಷಕಿ ಶ್ರೀಮತಿ ಪ್ರಿಯತ ಸರ್ವರನ್ನು ವಂದಿಸಿ , ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.