ಸುಳ್ಯ, ಡಿ. 07 (DaijiworldNews/TA): ಕುಕ್ಕೆ ಸುಬ್ರಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ದೇವಸ್ಥಾನದ ಆಡಳಿತಕ್ಕೆ ಒಳಪಡುವ ಅಂಗಡಿ ಮುಂಗಟ್ಟುಗಳನ್ನು 11ತಿಂಗಳ ಅವಧಿಗೆ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದರಲ್ಲಿ ಕೆಲವು ಅಂಗಡಿಯವರು ದೇವಸ್ಥಾನಕ್ಕೆ ಬಾಡಿಗೆ ಪಾವತಿ ಮಾಡದೇ, ಅವಧಿ ಮೀರಿ ತಮಗೆ ಸಂಬಂಧಪಟ್ಟಿರದ ಫುಟ್ಪಾತ್ ನ್ನು ಸಹ ಅತಿಕ್ರಮಣ ಮಾಡಿ ವ್ಯಾಪಾರ ನಡೆಸುತ್ತಿದ್ದಾರೆ.

ಇದರಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಳದಿಂದ ಆದಿ ಸುಬ್ರಹ್ಮಣ್ಯ ಕಡೆಗೆ ಹೋಗುವ ಭಕ್ತಾದಿಗಳಿಗೆ ನಡೆದುಕೊಂಡು ಹೋಗಲು ಸಹ ಜಾಗವಿಲ್ಲದ ಪರಿಸ್ಥಿತಿ ಉಂಟಾಗಿದೆ. ಅಷ್ಟೇ ಅಲ್ಲದೇ ಇದರ ಕುರಿತಾಗಿ ದೇವಸ್ಥಾನದ ಎಇಓರವರ ಆದೇಶದ ಮೇರೆಗೆ ದೇವಳದ ಸಿಬ್ಬಂದಿಯನ್ನು ಪರಿಶೀಲನೆಗೆಂದು ಕಳುಹಿಸಿದಾಗ ಅಂಗಡಿ ಮಾಲಿಕ ಯಲ್ಲಪ್ಪ ಭಂಡಾರಿ ಎಂಬಾತ ದೇವಸ್ಥಾನದ ಸಿಬ್ಬಂದಿ ಮಹೇಶ್ ಎಂಬವರ ಕರ್ತವ್ಯಕ್ಕೆ ಅಡಿಬಂದಿದ್ದು, ಅಲ್ಲದೆ ಪ್ರಭಾವಿ ರಾಜಕೀಯ ವ್ಯಕ್ತಿಗಳ ಮೂಲಕ ಬೆದರಿಕೆ ಕರೆ ಮಾಡಿದ ಘಟನೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿ ದಿನೇ ದಿನೇ ಅಣಬೆಗಳಂತೆ ಅಂಗಡಿಮುಂಗಟ್ಟುಗಳು ಹುಟ್ಟಿಕೊಳ್ಳುತ್ತಿದ್ದು, ಇತರೆ ಊರಿನಿಂದ ಬಂದು ನೆಲೆಸಿರುವ ಜನರ ಅಂಗಡಿಗಳೇ ಹೆಚ್ಚಾಗಿ ಕಾಣಸಿಗುತ್ತಿವೆ. ಅಷ್ಟೇ ಅಲ್ಲದೇ ಅಂಗಡಿಗಳಲ್ಲಿ ಇತರೆ ಚಟುವಟಿಕೆಗಳು ಸಹ ನಡೆಯುತ್ತಿವೆ ಎಂಬುದು ಸ್ಥಳೀಯರ ಅನುಮಾನವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.