ಉಡುಪಿ, ಡಿ. 07 (DaijiworldNews/AA): ಕುತ್ಯಾರು ಗ್ರಾಮದ ಸ್ಥಳೀಯರೊಬ್ಬರಿಗೆ ಸೇರಿದ ತೋಟದಲ್ಲಿ ಕಳೆದ 6 ವರ್ಷಗಳಿಂದ ತೋಟ ನೋಡಿಕೊಳ್ಳುವ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರಿಗೆ ನಾಗರಹಾವು ಕಡಿದು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಸುರೇಂದ್ರ ಕಿಟ್ಟು ಪೂಜಾರಿ(54) ಎಂದು ಗುರುತಿಸಲಾಗಿದೆ.
ಸುರೇಂದ್ರ ಪೂಜಾರಿ ಅವರು ಡಿ. 5ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಡಿಕೆ ಮರಗಳಿಗೆ ಕ್ರಿಮಿನಾಶಕ ಸಿಂಪಡಿಸಲು ತೋಟಕ್ಕೆ ಹೋಗಿದ್ದಾಗ ನಾಗರಹಾವು ಕಚ್ಚಿದೆ. ತಕ್ಷಣವೇ ಅವರನ್ನು ಕಿನ್ನಿಗೋಳಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಸುರೇಂದ್ರ ಪೂಜಾರಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೃತರ ಪುತ್ರ ಕಿರಣ್ ಎಸ್ ಅವರು ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.