ಉಳ್ಳಾಲ, ಡಿ. 06 (DaijiworldNews/TA): ವಿದ್ಯಾರ್ಥಿಗಳ ಸಾಧನೆ ಕಾಲೇಜಿನ ಭವಿಷ್ಯ, ಗೌರವ ಮತ್ತು ಪರಿಚಯ. ದೂರದೃಷ್ಟಿ , ಶ್ರಮ, ಇವುಗಳನ್ನು ಬಿಡದೇ ನಿಮ್ಮ ಭವಿಷ್ಯವನ್ನು ಮಾತ್ರವಲ್ಲ, ಸಮಾಜದ ಭವಿಷ್ಯವನ್ನೂ ರೂಪಿಸುತ್ತೀರಿ ಎಂದುಮಂಗಳೂರು ಪೊಲೀಸ್ ಕಮಷೀನರ್ ಸುಧೀರ್ ಕುಮಾರ್ ರೆಡ್ಡಿ ಐಪಿಎಸ್ ಅಭಿಪ್ರಾಯಪಟ್ಟರು.








ಅವರು ನಾಟೆಕಲ್ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇದರ ಪ್ರಥಮ ಬ್ಯಾಚ್ ನ ಶಿಷ್ಯೋಪನಯನೀಯ ಸಂಸ್ಕಾರ ಆಯುರ್ ಪ್ರವೇಶಿಕಾ ಮತ್ತು ಎನ್ಎಬಿಹೆಚ್ ಅಕ್ರಿಡೇಷನ್ ಅನುಮತಿ ಪತ್ರವನ್ನು ಆಯುರ್ವೇದ ಕಾಲೇಜು ಆಡಿಟೋರಿಯಂನಲ್ಲಿ ನಡೆದ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಇಂದು ನಿಮ್ಮ ಮುಂದೆ ಪೊಲೀಸರು ಆಯುಕ್ತನಾಗಿ ನಿಂತಿದ್ದರೂ, ನನ್ನ ಜೀವನ ಆರಂಭವೇ ಬೇರೆ ದಿಕ್ಕಿನಲ್ಲಿತ್ತು. ಎಂಜಿನಿಯರ್ ಆಗುವ ಕನಸು, ತಂದೆಯ ಇಚ್ಛೆಯಂತೆ ವೈದ್ಯರಾಗುವ ಆಸೆ, ಇವೆಲ್ಲವೂ ನನ್ನ ಬದುಕಿನಲ್ಲಿ ಇದ್ದವು. ಎಸ್ ಎಸ್ ಎಲ್ ಸಿ ನಂತರ ಯಾವ ದಾರಿಯನ್ನು ಆರಿಸಬೇಕು ಎಂಬ ದೊಡ್ಡ ಗೊಂದಲ ಎಲ್ಲರಿಗೂ ಬರುತ್ತದೆ. ನನ್ನ ತಂದೆಯ ಇಚ್ಛೆಯಂತೆ ಡಾಕ್ಟರ್ ಆಗಬೇಕೆಂದು ಬಯಸಿದರು, ಆದರೆ ಆಗ ಮೆಡಿಕಲ್ ಮೆರಿಟ್ ಸೀಟ್ಗಳ ಯಶಸ್ಸಿನ ಪ್ರಮಾಣ ಕೇವಲ 30% ಮಾತ್ರವಾಗಿತ್ತು. ಆರು ತಿಂಗಳುಗಳ ಕಾಲ ಆಯುರ್ವೇದ ವೈದ್ಯರಿಗಾಗಿ ಕಾಯುವ ಸ್ಥಿತಿಯಿದೆ. ಅಂತಹ ವೈದ್ಯರು ಪ್ರತಿಯೊಂದು ವೈದ್ಯಕೀಯ ಪದ್ದತಿಗೂ ಗೌರವ ನೀಡುತ್ತಾ ವೃತ್ತಿಯನ್ನು ಪ್ಯಾಷನ್, ಸಿಸ್ಟಮ್ಯಾಟಿಕ್ ಹಾರ್ಡ್ವರ್ಕ್, ನಿರಂತರ ಕಲಿಕೆಯಿಂದ ರೂಪಿಸಿದವರು. ನಿಷ್ಠೆ ಅನ್ನುವುದು ಕ್ಷೇತ್ರದಲ್ಲಿ ಯಶಸ್ಸಿಗೆ ಮೂಲ ಮಂತ್ರ.
“ಜೀವನದಲ್ಲಿ ನಿಮ್ಮನ್ನು ಎಷ್ಟು ವೇತನ ಸಿಗುತ್ತದೆ ಎಂಬುದಕ್ಕಿಂತ, ವೇತನ ಬಂದರೂ ಬಾರದರೂ ನೀವು ಮಾಡುತ್ತಾ ಇರುವ ಕೆಲಸವೇ ನಿಜವಾದ ಪ್ಯಾಷನ್. ಜಗತ್ತಿನ ಯಾವುದೇ ಮಹಾನ್ ಆಟಗಾರ, ನಟ ಅಥವಾ ವಿಜ್ಞಾನಿ ಮೊದಲಲ್ಲ ಹೋರಾಟ ಮಾಡದೇ ಸಾಧನೆ ಮಾಡಿಲ್ಲ. “ಕಣ್ಣಿನ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಯೂ ಕೂಡ ಪ್ರಾಚೀನ ಭಾರತದಲ್ಲಿ ಪ್ರಾರಂಭವಾಯಿತು. ನಮ್ಮ ವೈದ್ಯಕೀಯ ಪರಂಪರೆ ಎಷ್ಟು ಶ್ರೇಷ್ಠವೋ ತಿಳಿಯೋಣ. ಪ್ರತಿಯೊಂದು ಸಂಸ್ಥೆ, ಪ್ರತಿಯೊಂದು ಕಾಲೇಜು ಇದರ ಖ್ಯಾತಿ ಅದರ ಅಲ್ಯೂಮ್ನಿ ಮೇಲೆ ನಿರ್ಮಿತ ಎಂದರು.
ಕರ್ನಾಟಕ ಸ್ಟೇಟ್ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಫರೀದ್ ಮಾತನಾಡಿ ಕಣಚೂರು ಸಂಸ್ಥೆ 10 ವರ್ಷಗಳ ಇತಿಹಾಸವನ್ನೇ ಸೃಷ್ಟಿಸಿದೆ. ತಂದೆ , ಸಹೋದರನ ಆಡಳಿತದ ಕ್ಷೇತ್ರದಲ್ಲಿ ಹಲವು ವೈದ್ಯಕೀಯ ಕಾಲೇಜುಗಳು ಹಾಗೂ ವೈದ್ಯಕೀಯ ಕಾಲೇಜುಗಳು , ಮೂರು ವಿಶ್ವವಿದ್ಯಾನಿಲಯಗಳು ಇರುವುದು ಶಿಕ್ಷಣ ಕ್ರಾಂತಿಯ ಜೊತೆಗೆ ಸಮಾಜಸೇವೆಯ ಭಾಗವಾಗಿದೆ.
ಶೀಘ್ರದಲ್ಲೇ ಕಣಚೂರು ವಿಶ್ವವಿದ್ಯಾನಿಲಯ ಆಗಿ ಹೊರಹೊಮ್ಮಲಿದೆ. ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಪ್ರಥಮವಾಗಿ ಎಲ್ಲಾ ಪಂಚಾಯತ್ ಸದಸ್ಯರಿಗೆ ಉಚಿತ ಆರೋಗ್ಯ ಚಿಕಿತ್ಸೆ ನೀಡಿದಾಗ ಇಡೀ ಗ್ರಾಮಗಳಿಗೆ ಆಸ್ಪತ್ರೆ ರಾಯಭಾರಿಗಳಾಗಿ ಅವರು ಕಾರ್ಯಾಚರಿಸುತ್ತಾರೆ ಅನ್ನುವುದನ್ನು ಮನಗಾಣಿಸಿದ್ದೇವೆ. ಈ ಮೂಲಕ ಸಮಾಜಸೇವೆಯೂ ಆಗುವುದು.“ನೀವು ಆಯುರ್ವೇದದ ಮೊದಲ ಬ್ಯಾಚ್ ವಿದ್ಯಾರ್ಥಿಗಳು. ನಿಮ್ಮ ಸಾಧನೆ ಈ ಸಂಸ್ಥೆಯ ಭವಿಷ್ಯ. ಶಿಸ್ತಿನೊಂದಿಗೆ, ಸಮರ್ಪಣೆಯೊಂದಿಗೆ ಮತ್ತು ಮಾನವೀಯತೆಯೊಂದಿಗೆ ಮುಂದುವರಿದರೆ ಕಣಚೂರು ಸಂಸ್ಥೆಯ ನಿಮ್ಮ ಮೂಲಕ ಹೊಸ ಎತ್ತರಕ್ಕೆ ಹೋಗುತ್ತದೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಗಳ ಕುಲಸಚಿವ ಅರ್ಜುನ್ ಎಸ್ ಒಡೆಯರ್ ಕೆಎಎಸ್ ಮಾತನಾಡಿ, ಕಾಯಿಲೆ ಬರುವ ಮೊದಲು ತಡೆಯುವ ಸಾಮರ್ಥ್ಯ ಹೊಂದಿರುವ ಅಪೂರ್ವ ತತ್ತ್ವಶಾಸ್ತ್ರ. ಇಂದಿನ ಜಾಗತಿಕ ಆರೋಗ್ಯ ಸವಾಲುಗಳಿಗೆ ಆಯುರ್ವೇದ ಪರಿಣಾಮಕಾರಿ ಪರಿಹಾರ ನೀಡುತ್ತಿದೆ. ನಮ್ಮ ಪಾರಂಪರಿಕ ಜ್ಞಾನವನ್ನು ವಿಜ್ಞಾನಾತ್ಮಕವಾಗಿ ಅಧ್ಯಯನ ಮಾಡಿದಂತೆ ಅದರ ಮಹತ್ವ ಇನ್ನಷ್ಟು ಸ್ಪಷ್ಟವಾಗಿ ಮನಗಾಣುತ್ತದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಅಡಿಯಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವು ಸುಧಾರಣೆಯತ್ತ ಸಾಗುತ್ತಿದೆ. ಡಾ. ಭಗವಾನ್, ಡಾ. ಇಫ್ತಿಖಾರ್ ಸೇರಿದಂತೆ ಶಿಕ್ಷಣ ಕ್ಷೇತ್ರದ ಪ್ರಮುಖರು ಹೊಸ ಚಿಂತನೆಗಳು, ಹೊಸ ವ್ಯವಹಾರ ಪದ್ಧತಿಗಳು, ತಂತ್ರಜ್ಞಾನಾಧಾರಿತ ವ್ಯವಸ್ಥೆಗಳನ್ನು ತರಲು ಶ್ರಮಿಸುತ್ತಿದ್ದಾರೆ.
ವಿದ್ಯಾರ್ಥಿ ಸಮುದಾಯವನ್ನು ಮಾದಕವಸ್ತುಗಳಿಂದ ದೂರವಿಟ್ಟು, ಜಾಗೃತಿಯುತ ಸಮಾಜ ನಿರ್ಮಾಣದ ಗುರಿ ಹೊಂದಲು ನಶಾ ಮುಕ್ತ್ ಭಾರತ್ ಅಭಿಯಾನ, ಪರೀಕ್ಷಾ ಫಲಿತಾಂಶವನ್ನು ಈಗ 7–10 ದಿನಗಳ ಒಳಗೆ ಫಲಿತಾಂಶ ಪ್ರಕಟಿಸುವ ವೇಗದ ವ್ಯವಸ್ಥೆ ಅಳವಡಿಸಿಕೊಂಡಿದೆ. ಡಿಜಿಲಾಕರ್ ಮೂಲಕ ಮಾರ್ಕ್ಸ್ಕಾರ್ಡ್, ಪ್ರಮಾಣಪತ್ರಗಳು ದಾಖಲೆಗಳು ಸುರಕ್ಷಿತವಾಗಿ, ಸುಲಭವಾಗಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆ. ಮರಣಾನಂತರವೂ ಯಾರಿಗಾದರೂ ಹೊಸ ಜೀವನ ಸಿಗಲಿ . ಇದೇ ವೈದ್ಯಕೀಯ ವೃತ್ತಿಯ ಮಹಾನ್ ಮಾನವೀಯ ಕರ್ತವ್ಯವಾಗಿರುವುದರಿಂದ ಅಂಗಾಂಗ ದಾನಗಳಿಗೆ ಹೆಚ್ಚಿನ ಒಲವು ನೀಡುತ್ತಿದೆ ಎಂದರು.
ಎನ್ ಎ ಬಿ ಹೆಚ್ ಅಕ್ರಿಡೇಷನ್ ಅನುಮತಿ ಪತ್ರವನ್ನು ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು. ಕಣಚೂರು ಮೋನು ಅವರಿಗೆ ಹಸ್ತಾಂತರಿಸಲಾಯಿತು. ಶಿಷ್ಯೋಪನಯನೀಯ ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ಅತಿಥಿಗಳು ನಡೆಸಿಕೊಟ್ಟರು. ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡಾ.ವಿದ್ಯಾಪ್ರಭಾ ಆರ್. ಉಪಸ್ಥಿತರಿದ್ದರು. ಈ ಸಂದರ್ಭ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಡಾ. ಸುರೇಶ್ ನೆಗಲಗುಳಿ ವಂದಿಸಿದರು.