ಉಳ್ಳಾಲ, ಡಿ. 06 (DaijiworldNews/TA): ಭಗವಂತನ ಮೇಲೆ ವಿಶ್ವಾಸವಿರಲಿ, ಕೆಲಸ ಕಾರ್ಯಗಳು ವ್ಯವಸ್ಥಿತವಾಗಿ ಸಾಗುತ್ತವೆ. ಹನುಮನ ಕೃಪಾಕಟಾಕ್ಷದಿಂದ ನೂತನ ಮಂದಿರದ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಎಂದು ಒಡಿಯೂರು ಗುರುದೇವಾದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ನುಡಿದರು.

ಉಳ್ಳಾಲದ ಹನುಮಾನ್ ನಗರದಲ್ಲಿ ಶ್ರೀ ವೀರಾಂಜನೇಯ ಸೇವಾ ಟ್ರಸ್ಟ್, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಆಶ್ರಯದಲ್ಲಿ ನಡೆದ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ನೂತನ ಮಂದಿರ ಜೀರ್ಣೋದ್ಧಾರ ಕಾರ್ಯದ ಪ್ರಥಮ ಹಂತವಾದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ನಂತರ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದರು. ಹನುಮಂತನ ಅನುಗ್ರಹದಿಂದ ಮಂದಿರ ಒಂದು ವರ್ಷದಲ್ಲಿ ನಿರ್ಮಾಣವಾಗುವಂತಾಗಲಿ. ಧರ್ಮಸೇನಾನಿಗಳು ನಾವು ಆದಾಗ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಉಳ್ಳಾಳ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಮಾತನಾಡಿ, ಯುವಜನತೆ ಹುರುಪುತನದಿಂದ ಪುಣ್ಯ ಕಾರ್ಯದ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಸಿಕೊಂಡು ಹೋಗುತ್ತಿದೆ. ಕದ್ರಿ ನವನೀತ್ ಶೆಟ್ಟಿ ನೂತನ ಮಂದಿರದ ಮುಂದಾಳತ್ವವನ್ನು ವಹಿಸಿಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಎಂದರು. ವೀರಾಂಜನೇಯ ಶಾಲೆಯ ದೈವಜ್ಞರಾದ ರಂಗ ಐತಾಳ್ ಮತ್ತು ತಂತ್ರಿವರ್ಯರಾದ ಪ್ರಸಾದ್ ನಲ್ಲುರಾಯ ಮಾರ್ಗದರ್ಶನದಂತೆ ಹನುಮ ಫಲದ ಗಿಡವನ್ನು ಒಡಿಯೂರು ಸ್ವಾಮೀಜಿ ನೇತೃತ್ವದಲ್ಲಿ ನೆಡಲಾಯಿತು.
ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ನೂತನ ಮಂದಿರ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಶ್ರೀ ಸಾಯಿ ಪ್ರಾಪರ್ಟಿಸ್ ಎಂಡ್ ಇನ್ಫ್ರಾಸ್ಟಕ್ಚರ್ ಮಾಲಕರು ಸುಧೀನ್ ಚೌಟ ಮತ್ತು ರಾಧೇಶ್ ಶೇಖರ ಕೋಟ್ಯಾನ್, ಶ್ರೀ ವೀರಾಂಜನೇಯ ಶಾಲೆಯ ನೂತನ ಮಂದಿರದ ಪುನರ್ ಪ್ರತಿಷ್ಠಾ ಸಮಿತಿಯ ಅಧ್ಯಕ್ಷ ಕದ್ರಿ ನವನೀತ್ ಶೆಟ್ಟಿ, ಚಂದ್ರಹಾಸ್ ಪೂಂಜ ಕಿಲ್ಲೂರು ಗುತ್ತು ಸೇರಿದಂತೆ ಹಲವರು ಉಪಸ್ಥಿತರಿದ್ದರು.