Karavali
ಮಂಗಳೂರು: ಮುಸ್ಲಿಮರ ಪ್ರಸಾದಕ್ಕೆ ಹಿಂದೂಗಳ ಸ್ಪರ್ಶ- ಏನಿದು ಸರ್ವಧರ್ಮೀಯರು ಪಾಲ್ಗೊಳ್ಳುವ ಮಾಲಿದಾ ಉರೂಸ್?
- Sat, Dec 06 2025 12:42:43 PM
-
ಮಂಗಳೂರು, ಡಿ. 06 (DaijiworldNews/AK): ಕೋಮು ಸಂಘರ್ಷದಿಂದ ಜಿಲ್ಲೆಯಲ್ಲಿ ಒಂದು ಸಣ್ಣ ಪುಟ್ಟ ಘಟನೆಗಳು ಕೋಮು ಬಣ್ಣ ಪಡೆದುಕೊಳ್ಳುತ್ತವೆ. ಇಂತಹ ಪರಿಸ್ಥಿತಿ ಇರುವ ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದತೆಯನ್ನೇ ಮಾದರಿಯನ್ನಾಗಿ ತೋರಿಸುವ ಉರೂಸ್ ಕಾರ್ಯಕ್ರಮವೊಂದು ಸದ್ದಿಲ್ಲದೇ ನಡೆದುಕೊಂಡು ಬರುತ್ತಿದೆ. ಸರ್ವಧರ್ಮೀಯರು ಪಾಲ್ಗೊಳ್ಳುವ ಈ ಮಾಲಿದಾ ಉರೂಸ್ ವಿಶೇಷತೆಯಾಗಿದೆ.





ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರುವಿನಲ್ಲಿರುವ ಮಸೀದಿಯಲ್ಲಿ ಇತಿಹಾಸ ಪ್ರಸಿದ್ಧ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ರವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಮಾಲಿದಾ ಉರೂಸ್ ಈ ಕೋಮುಸೌಹಾರ್ದತೆಗೆ ಮಾದರಿಯಾಗಿದೆ. ಈ ಬಾರಿ 753ನೇ ಉರೂಸ್ ನಡೆಯುತ್ತಿದೆ. ಈ ಉರೂಸ್ ಕಾರ್ಯಕ್ರಮದಲ್ಲಿ ಮಾಲಿದಾ ಎಂಬ ಪ್ರಸಾದ ನೀಡುವುದು ವಿಶೇಷ. ಈ ಪ್ರಸಾದ ತಯಾರಿ ಮತ್ತು ಸ್ವೀಕಾರದಲ್ಲಿ ಭಾವೈಕ್ಯತೆಯೇ ತುಂಬಿಕೊಂಡಿದೆ.
ಏನಿದು ಮಾಲಿದಾ? : ಮಾಲಿದಾ ಉರೂಸ್ ಮೊದಲು 3 ದಿವಸ ಹಗಲು - ರಾತ್ರಿ ನಡೆಯುತ್ತಿತ್ತು. ಇದೀಗ ರಾತ್ರಿ 11 ಗಂಟೆಯವರೆಗೆ 5 ದಿನಗಳ ಕಾಲ ನಡೆಯಲಿದೆ. ಈ ಉರೂಸ್ನಲ್ಲಿ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ ಅವರ ಪ್ರಿಯವಾದ ಸಿಹಿ ತಿಂಡಿ ಮಾಲಿದಾವನ್ನು ಮಸೀದಿಯಿಂದ ತಯಾರಿಸಿ ವಿತರಿಸಲಾಗುತ್ತದೆ.
ಮಾಲಿದಾ ತಯಾರಿಸುವುದು ಹೇಗೆ?:
ಮಾಲಿದಾ ಎಂದರೆ ಅಕ್ಕಿರೊಟ್ಟಿಯನ್ನು ದಪ್ಪ ಮಟ್ಟದಲ್ಲಿ ತಯಾರಿಸಿ, ಅದಕ್ಕೆ ಬೆಲ್ಲ ಮತ್ತು ತುಪ್ಪ ಹಾಕಿ, ಕುದಿಸಿ ಮಾಡಿದ ಸಿಹಿತಿಂಡಿ. ಇದನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಎರಡನೇ ಹಂತದಲ್ಲಿ ಊರು, ಪರವೂರಿನ ಮುಸ್ಲಿಮರು ತಮ್ಮ ಮನೆಯಲ್ಲಿ ಮಾಲಿದಾ ತಯಾರಿಸಿ ಮಸೀದಿಗೆ ನೀಡುತ್ತಾರೆ. ಹೀಗೆ, ಮುಸ್ಲಿಮರು ತಮ್ಮ ಮನೆಯಲ್ಲಿ ತಯಾರಿಸುವ ಮಾಲಿದಾಕ್ಕೆ ಹಿಂದೂ ಭಕ್ತರು ಅದಕ್ಕೆ ಬೇಕಾದ ವಸ್ತುಗಳನ್ನು ನೀಡುತ್ತಾರೆ. ಇದನ್ನು ಮಸೀದಿಯಲ್ಲಿಟ್ಟು, ಉರೂಸ್ಗೆ ಬಂದ ಹಿಂದೂ - ಮುಸ್ಲಿಂ ಭಕ್ತರಿಗೆ ವಿತರಿಸಲಾಗುತ್ತದೆ.
ಮಾಲಿದಾ ಎಂಬ ಪ್ರಸಾದವನ್ನು ಎಲ್ಲರೂ ಭಕ್ತಿಯಿಂದ ಸ್ವೀಕರಿಸುತ್ತಾರೆ. ಉರೂಸ್ನಲ್ಲಿ ಎಲ್ಲರೂ ಸಂತಸದಿಂದ ಭಾಗವಹಿಸುತ್ತಾರೆ. ಈ ಉರೂಸ್ಗೆ ಕರ್ನಾಟಕ ರಾಜ್ಯ ಮಾತ್ರವಲ್ಲದೇ, ಕೇರಳ ಸೇರಿ ಇನ್ನಿತರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.
ಇಲ್ಲಿನ ಮಸೀದಿಗೆ ಇದೆ 800 ವರ್ಷಗಳ ಭವ್ಯ ಇತಿಹಾಸ: 800 ವರ್ಷಗಳ ಹಿಂದೆ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ ಅವರು ಇಲ್ಲಿ ಈ ಮಸೀದಿಯನ್ನು ಸ್ಥಾಪಿಸಿದರು. ಅವರು ಅಪ್ಘಾನಿಸ್ತಾನ - ಪರ್ಶಿಯನ್ ಗಡಿಯ ರಾಜ್ಯವೊಂದರ ರಾಜರಾಗಿದ್ದರು. ಅವರು ಲೌಕಿಕ ಬದುಕು ತ್ಯಜಿಸಿ ಮಾನವರ ಕಲ್ಯಾಣಕ್ಕಾಗಿ ಪಟ್ಟವನ್ನು ತ್ಯಜಿಸಿ, ವಿಶ್ವ ಸಂಚಾರ ಮಾಡಿ, ಅಜಿಲಮೊಗರುವಿಗೆ ಬಂದು, ಸಾಮಾಜಿಕ ಕರ್ತವ್ಯ ಪೂರೈಸಲು ಅಜಿಲಮೊಗರು ಮಸೀದಿಯನ್ನು ಸ್ಥಾಪಿಸಿದರು. ಮಸೀದಿಯಲ್ಲಿ ದೈನಂದಿನ ಪ್ರಾರ್ಥನೆ ಮಾತ್ರವಲ್ಲದೇ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಸೌಹಾರ್ದತೆಯ ತಾಣ : ಬಂಟ್ವಾಳ ತಾಲೂಕಿನ ಅಜಿಲಮೊಗರುವಿನ ಮಸೀದಿಯು ಇಲ್ಲಿನ ನೇತ್ರಾವತಿ ನದಿ ತಟದಲ್ಲಿದೆ. ಈ ನದಿಯ ಒಂದು ಭಾಗದಲ್ಲಿ ಅಜಿಲಮೊಗರು ಮಸೀದಿ ಇದ್ದರೆ, ಮತ್ತೊಂದು ಭಾಗದಲ್ಲಿ ಲಕ್ಷ್ಮಿ ನರಸಿಂಹ ದೇವಸ್ಥಾನ ಇದೆ. ಇದೀಗ ಮಸೀದಿ ಮತ್ತು ದೇವಸ್ಥಾನ ಮಧ್ಯೆ ಇರುವ ನದಿಗೆ ಸೇತುವೆ ಕಟ್ಟಲಾಗುತ್ತಿದ್ದು, ಇದಕ್ಕೆ ಸೌಹಾರ್ದ ಸೇತುವೆ ಎಂದು ಹೆಸರಿಸಲಾಗಿದೆ. ಇಲ್ಲಿ ಕೋಮು ಗಲಭೆ, ಕೋಮು ವೈಷಮ್ಯ ಘಟನೆಗಳು ನಡೆದಿಲ್ಲ ಎನ್ನುತ್ತಾರೆ ಹಿರಿಯರು.
ಅಜಿಲಮೊಗರು ರಾಜ್ಯಕ್ಕೆ ಮಾದರಿಯಾಗಿದೆ. ಇಲ್ಲಿ ನಡೆಯುವ ಉರೂಸ್ ಮುಸಲ್ಮಾನರ ಹಬ್ಬವಲ್ಲ. ಎಲ್ಲ ಧರ್ಮಿಯರ ಹಬ್ಬವಾಗಿದೆ. ಅಜಿಲಮೊಗರುವಿನಿಂದ ಮದುವೆಯಾಗಿ ಹೋದಂತಹ ಹಿಂದೂ ಧರ್ಮದ ಮಹಿಳೆಯರು ಉರೂಸ್ ಸಂದರ್ಭದಲ್ಲಿ ಊರಿನ ಹರಕೆ ಎಂದು ತವರು ಮನೆಗೆ ಬರುವುದು ವಿಶೇಷ.
ಮಾಲಿದಾಕ್ಕೂ ಇದೆ ಧಾರ್ಮಿಕ ಇತಿಹಾಸ; ಈ ಬಗ್ಗೆ ಅಜಿಲಮೊಗರು ಮಸೀದಿಯ ಖತೀಬ್ ಮುದರೀಸ್ ತ್ವಾಖಾ ಅಹ್ಮದ್ ಸಹದಿ ಅವರು ಮಾತನಾಡಿ, 'ಮಾಲಿದಾ ಎಂಬುದು ಇಲ್ಲಿನ ವಿಶೇಷವಾದ ಪ್ರಸಾದ. ಅಕ್ಕಿ, ಬೆಲ್ಲ, ತುಪ್ಪಗಳಿಂದ ಮಿಶ್ರಣ ಮಾಡಿ ತಯಾರಿಸುವ ಪ್ರಸಾದವಾಗಿದೆ. ಮಾಲಿದಾ ಎಂಬುದು ಅರೇಬಿಕ್ನ ಪ್ರಸಾದವಾಗಿದೆ. ಅದರ ಹೆಸರೇ ತಿಳಿಸುವಂತೆ ಅದನ್ನು ರೋಗದ ಮದ್ದು ಎಂದು ಕರೆಯುತ್ತಾರೆ. ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ ಅವರು ಮಾಲಿದಾವನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಅದನ್ನೇ ಈಗ ಜನರು ತಯಾರು ಮಾಡಿ ತಿನ್ನಲು ಶುರು ಮಾಡಿದರು. ಹತ್ತಿರ ಊರುಗಳಿಂದ, ಜಿಲ್ಲೆಗಳಿಂದ ಅದನ್ನು ಸಿದ್ದಪಡಿಸಿ ತರುತ್ತಾರೆ. ಮಾಲಿದಾವನ್ನು ಜನರು ತಮ್ಮ ಉದ್ದೇಶ ಸಿದ್ಧಿಗಾಗಿ, ರೋಗ ಶಮನಕ್ಕೆ ಅಥವಾ ಏನಾದರೂ ತೊಂದರೆ ಬಂದಾಗ ಅದನ್ನು ಸೇವಿಸುತ್ತಾರೆ. ಹಲವಾರು ಬೇಡಿಕೆ ಈಡೇರಿಕೆಗಾಗಿ ಮಾಲಿದಾವನ್ನು ತಯಾರಿಸಿ ಇಲ್ಲಿಗೆ ತಲುಪಿಸುತ್ತಾರೆ
ಇದು ಧರ್ಮಗಳನ್ನು ಮೀರಿದ ಸಿಹಿತಿಂಡಿ; ಈ ಬಗ್ಗೆ ಅಧ್ಯಕ್ಷ ಅಬ್ದುಲ್ ಹಮೀದ್ ಅವರು ಮಾತನಾಡಿ, 'ಮಾಲಿದ ಪ್ರಸಾದ ಎಂಬುದು ಪವಿತ್ರವಾದದ್ದು, ಇದು ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ ಅವರ ಪ್ರಿಯವಾದ ಸಿಹಿತಿಂಡಿ. ಇಲ್ಲಿ ಈ ಪ್ರಸಾದವನ್ನು ಹಿಂದೂ ಮುಸ್ಲಿಂ ಎನ್ನದೇ ಎಲ್ಲರೂ ಸೌಹಾರ್ದತೆಯಿಂದ ಸ್ವೀಕರಿಸುತ್ತಾರೆ' ಎಂದು ಹೇಳಿದ್ದಾರೆ.
ಮಾಲಿದಾ ಪ್ರಸಾದ ಪವಿತ್ರವಾದದ್ದು, ಈ ಪ್ರಸಾದವನ್ನು ಮುಸ್ಲಿಮರಷ್ಟೇ ಹಿಂದೂಗಳು ಗೌರವದಿಂದ ಕಾಣುತ್ತಾರೆ. ಇಲ್ಲಿ ಪ್ರತಿ ಧರ್ಮದವರು ಮಾಲಿದಾಕ್ಕೆ ಬೇಕಾದ ಪದಾರ್ಥಗಳನ್ನು ಕೊಡುತ್ತಾರೆ. ಅದನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಮಾಡಿ ಇಲ್ಲಿಗೆ ಒಪ್ಪಿಸುತ್ತಾರೆ. ಇದು ಪವಿತ್ರವಾದ ಕ್ಷೇತ್ರ. ಇಲ್ಲಿನ ಪ್ರಸಾದಕ್ಕೆ ರಾತ್ರಿ ಹಗಲು ಕ್ಯೂ ನಿಂತು ತೆಗೆದುಕೊಳ್ಳುತ್ತಾರೆ. ನಾವು ಉರೂಸ್ ವೇಳೆ ಇಲ್ಲಿಯೇ ಇದ್ದು ಸಹಕರಿಸುತ್ತೇವೆ' ಎಂದು ಅಜಿಲಮೊಗರು ನಿವಾಸಿ ಸಂಜೀವ ಪೂಜಾರಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿ ವಿಶ್ವನಾಥ್ ಶೆಟ್ಟಿ ಮಾತನಾಡಿ, 'ಇಲ್ಲಿನ ಜಾಗ ನಮಗೆ ಪವಿತ್ರವಾದುದು. ಮುಸ್ಲಿಮರಿಗಿಂತ ನಾವು ಹಿಂದೂಗಳು ಹೆಚ್ಚು ಪೂಜಿಸುತ್ತೇವೆ. ನಮ್ಮ ಮಕ್ಕಳಿಗೆ ಹುಷಾರಿಲ್ಲದಾಗ ಇಲ್ಲಿನ ಗುರುಗಳು ಪ್ರಾರ್ಥಿಸಿ ಒಂದು ನೂಲು ಕಟ್ಟಿದರೆ ಸಂಪೂರ್ಣ ಗುಣವಾಗುತ್ತದೆ. ನಾನು 60 ವರ್ಷದಿಂದ ಈ ಪ್ರಸಾದವನ್ನು ಪಡೆಯುತ್ತಿದ್ದೇನೆ' ಎಂದಿದ್ದಾರೆ.