ಉಡುಪಿ, ಡಿ. 06 (DaijiworldNews/TA): ಪರ್ಯಾಯ ಶ್ರೀ ಪುತ್ತಿಗೆ ಮಠ ಕೃಷ್ಣಮಠ ಉಡುಪಿ ಆಶ್ರಯದಲ್ಲಿ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭ ಡಿ.7ರಂದು ನಡೆಯಲಿದೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.

ಅವರು ಈ ಬಗ್ಗೆ ಮಠದ ಗೀತಾ ಮಂದಿರದಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಬೃಹತ್ ಗೀತೋತ್ಸವ ಸಮಾರೋಪ ಸಮಾರಂಭ ಕೃಷ್ಣಮಠ ರಾಜಾಂಗಣದಲ್ಲಿ ನಡೆಯಲಿದೆ. ಮುಖ್ಯ ಅಭ್ಯಾಗತರಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಗಮಿಸಲಿದ್ದು, ಅದರೊಂದಿಗೆ ಪುತ್ತಿಗೆ ವಿದ್ಯಾಪೀಠದ 38 ನೇ ಘಟಿಕೋತ್ಸವ ಮತ್ತು ಪಾಡಿಗಾರು ವಿದ್ಯಾಪೀಠದ 1ನೇ ಘಟಿಕೋತ್ಸವ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಯಾಯ ಶ್ರೀ ಪುತ್ತಿಗೆ ಮಠ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಹಿಸಲಿದ್ದಾರೆ. ಕಿರಿಯ ಪಟ್ಟ ಪರ್ಯಾಯ ಪರಮಪೂಜ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ದಿವ್ಯ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಿದ್ವಾನ್ ಪ್ರಭಾಕರ್ ಅಡಿಗ, ವಿದ್ವಾನ್ ರಾಘವೇಂದ್ರ ಉಪಾಧ್ಯಾಯ ಉಚ್ಚಿಲ, ಸೇರಿದಂತೆ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರುವರು.
ಬೆಳಗ್ಗೆ ಘಟಿಕೋತ್ಸವ ಸಂಜೆ ದೀಪೋತ್ಸವ ನಡೆಯಲಿದೆ, ದಿನಾಂಕ 6 ರಿಂದ 12 ರ ತನಕ ಇಸ್ಕಾನ್ ವತಿಯಿಂದ ಕಾರ್ಯಕ್ರಮಗಳು ನಡೆಯಲಿದೆ. ಡಿಸೆಂಬರ್ 13ರಂದು ವಿಶ್ವ ಶಾಂತಿ ಸಮ್ಮೇಳನ ಕೂಡ ಹಮ್ಮಿಕೊಳ್ಳಲಾಗಿದೆ. ಇಸ್ಕಾನಿನವರ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಡಾ. ವಿಂಡೆ, ಅಬ್ದುಲ್ ನಜೀರ್, ಸಂಜೆ ವೇಳೆಯಲ್ಲಿ ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್, ವೀರಪ್ಪ ಮೊಯ್ಲಿ ಅವರು ಬರಲಿದ್ದು ಅವರನ್ನು ಸನ್ಮಾನಿಸಿ ಗೌರವಿಸಲಿರ್ಧದ್ದೇವೆ. ಐವನ್ ಡಿ ಸೋಜಾ, ಎಚ್ ಡಿ ಕುಮಾರಸ್ವಾಮಿ, ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.