ಮಂಗಳೂರು, ಡಿ. 06 (DaijiworldNews/TA): ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಸರಣಿ ಮುಂದುವರಿದಿದ್ದು, ಈಗಾಗಲೇ ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದರೂ, ಕಳ್ಳತನ ಸರಣಿಗೆ ಬ್ರೇಕ್ ಬಿದ್ದಿಲ್ಲ. ಹಾಗಾಗಿ ಇದು ಒಂದೇ ತಂಡದ ಕೃತ್ಯವಲ್ಲ. ಬೇರೆ ಬೇರೆ ತಂಡಗಳು ಅಥವಾ ವ್ಯಕ್ತಿಗಳು ಇದರ ಹಿಂದೆ ಇರುವುದು ಬಹುತೇಕ ಖಚಿತವಾಗಿದೆ.

ಸದ್ಯ ಸಿಕ್ಕಿ ಬಿದ್ದಿರುವ ಇಬ್ಬರು ಆರೋಪಿಗಳು ಕೇರಳ ಮೂಲದವರಾಗಿದ್ದು, ಯಾವುದೋ ಉದ್ದೇಶಕ್ಕೆ ನಗರಕ್ಕೆ ಬಂದವರು ಹೋಗುವಾಗ ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಹೋಗಿದ್ದರು. ಬಂಧಿತರಿಂದ ಕಳವು ಮಾಡಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಲ್ಲಿ ಓರ್ವ ಕೇರಳದ ಎರಡು ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಆರೋಪಿಯೂ ಹೌದು. ಹಾಗಾಗಿ ಪೊಲೀಸರ ಕಾರ್ಯಾಚರಣೆ ಒಂದು ಹಂತದಲ್ಲಿ ಯಶಸ್ವಿಯಾದರೂ, ನಗರ ವ್ಯಾಪ್ತಿಯಲ್ಲಿ ಈಗಾಗಲೇ ಕಳವಾಗಿರುವ ಸಾಕಷ್ಟು ದ್ವಿಚಕ್ರ ವಾಹನಗಳ ಆರೋಪಿಗಳ ಪತ್ತೆ ಮಾತ್ರ ಇನ್ನೂ ಆಗಿಲ್ಲ.
ದ್ವಿಚಕ್ರ ವಾಹನ ಕಳವು ಪೊಲೀಸರ ಪಾಲಿಗೆ ಸವಾಲಾಗಿದೆ. ಕಳ್ಳತನ ಮಾಡುವವರು ದ್ವಿಚಕ್ರ ವಾಹನವನ್ನು ಕೀಲಿಕೈ ಇಲ್ಲದೆ ವಯರ್ಗಳನ್ನು ಜೋಡಿಸಿ ನೇರವಾಗಿ ಸಂಪರ್ಕ ಕಲ್ಪಿಸಿ (ಡೈರೆಕ್ಟ್ ಕನೆಕ್ಷನ್) ಕಳ್ಳತನ ಮಾಡುತ್ತಾರೆ. ಹ್ಯಾಂಡ್ ಲಾಕ್ ಹಾಕದಿದ್ದರೆ ನಿಲ್ಲಿಸಿರುವ ಜಾಗದಿಂದ ಒಂದಷ್ಟು ದೂರ ತಳ್ಳಿಕೊಂಡು ಅಥವಾ ಇಳಿಜಾರು ಜಾಗವಾದರೆ ಕುಳಿತುಕೊಂಡು ಹೋಗಿ ಅಲ್ಲಿ ಬಳಿಕ ಡೈರೆಕ್ಟ್ ಮಾಡಿ ಅಲ್ಲಿಂದ ಚಲಾಯಿಸಿಕೊಂಡು ಹೋಗುತ್ತಾರೆ.
ವಾಹನ ಕಳವು ಪ್ರಕರಣ ಹೆಚ್ಚುತ್ತಿರುವ ಕಾರಣ, ದ್ವಿಚಕ್ರ ವಾಹನಗಳ ಮಾಲಕರು ಎಚ್ಚತ್ತಕೊಳ್ಳುವ ಅಗತ್ಯವಿದೆ. ವಾಹನವನ್ನು ನಿಲ್ಲಿಸಿ ಹೋಗುವ ಸ್ಥಳವೂ ಕೆಲವೊಮ್ಮೆ ಕದಿಯಲು ಸುಲಭವಾಗುವಂತಿರುತ್ತದೆ. ಹ್ಯಾಂಡ್ ಲಾಕ್ ಮಾಡಿಯೇ ಹೋಗುವುದು ಉತ್ತಮ. ಕೀಲಿಕ ಕೈಯನ್ನು ಮರೆಯದೆ ತೆಗೆದುಕೊಂಡು ಹೋಗಬೇಕು. ಸಿಸಿ ಕೆಮರಾ ಕಣ್ಗಾವಲು, ಜನರ ಓಡಾಟ ಹೆಚ್ಚು ಇರುವಲ್ಲಿ ನಿಲ್ಲಿಸುವುದರಿಂದ ಸುರಕ್ಷತೆ ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ.