ಮಂಗಳೂರು, ಡಿ. 05 (DaijiworldNews/AK):ಅಂತರ್ ರಾಜ್ಯ ವಾಹನ ಹಾಗೂ ಸರಗಳ್ಳತನದ ಆರೋಪಿಯನ್ನು ಗುರುವಾರ ಬಂಧಿಸಿರುವ ಕದ್ರಿ ಪೊಲೀಸರು ನಾಲ್ಕು ದ್ವಿಚಕ್ರ ವಾಹನ ಮತ್ತು ಎರಡು ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ತಿರುವನಂತಪುರಂನ ಆದಿತ್ ಗೋಪಾನ್ ಯಾನೆ ಮುತ್ತು ಕೃಷ್ಣ (32)ಬಂಧಿತ ಆರೋಪಿಯಾಗಿದ್ದಾನೆ. ನ.21ರಂದು ನಗರದ ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷ ಪ್ರಾಯದ ವಯೋವೃದ್ಧೆಯೊಬ್ಬರು ತನ್ನ ಮನೆಯ ಬಳಿ ಓಣಿಯಲ್ಲಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ಸರವನ್ನು ಕಸಿದುಕೊಂಡು ಹೋಗಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಡಿ. 04 ರಂದು ಆರೋಪಿಯ ಬಗ್ಗೆ ವಿಶೇಷ ತಂಡಕ್ಕೆ ದೊರೆತ ಮಾಹಿತಿಯಂತೆ ಕದ್ರಿ ಜೋಗಿ ಮಠದ ಬಳಿ ವಾಹನ ತಪಸಾಣೆ ನಡೆಸುತ್ತಿದ್ದ ಸಮಯ ಸಂಶಯಾಸ್ಪದವಾಗಿ ದ್ವಿಚಕ್ರ ವಾಹನ ಸಂಖ್ಯೆ KA19HC6946 ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ ಈ ವಾಹನವು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ ವಾಹನವಾಗಿದ್ದು, ವಿಚಾರಿಸಿದಾಗ ಆರೋಪಿಯು ಕಳ್ಳತನ ಮಾಡಿದ ದ್ವಿ ಚಕ್ರ ವಾಹನವನ್ನು ಬಳಸಿಕೊಂಡು ವಯೋವೃದ್ದರು, ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳ್ಳತನ ಮಾಡಿರುವುದ ಬೆಳಕಿಗೆ ಬಂದಿದೆ.
ಆರೋಪಿಯನ್ನು ನ. 05 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಮುಂದಿನ ತನಿಖೆಗಾಗಿ ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ನ.21ರಂದು ಕದ್ರಿ ಬಟ್ಟಗುಡ್ಡೆ ಬಳಿ ವಯೋವೃದ್ಧೆಯ 1.5 ಪವನ್ ಚಿನ್ನದ ಸರವನ್ನು ಸುಲಿಗೆ ಮಾಡಿದ್ದ. ಸೆ.29ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಕೋಟೆಕೇರಿ ಬಳಿ ಒಂಟಿ ಮಹಿಳೆಗೆ ಚೂರಿ ತೋರಿಸಿ ಬೆದರಿಸಿ 2 ಪವನ್ ಚಿನ್ನದ ಸರವನ್ನು ಸುಲಿಗೆ ಮಾಡಿದ್ದ.
ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದ್ವಿ ಚಕ್ರ ವಾಹನ ಕಳವು ಮಾಡಿದ್ದ. ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ದ್ವಿ ಚಕ್ರ ವಾಹನ ಕಳವು ಮಾಡಿದ್ದ. ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಮತ್ತು ಅಗರಮೇಲು ಎಂಬಲ್ಲಿ ಎರಡು ದ್ವಿಚಕ್ರ ವಾಹನ ಕಳವು ಮಾಡಿದ್ದ. ಹೀಗೆ ಆರೋಪಿಯಿಂದ 4 ದ್ವಿಚಕ್ರ ವಾಹನ ಮತ್ತು ಚಿನ್ನಾಭರಣ ಸಮೇತ ಸಹಿತ 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯ ಮೇಲೆ ಈಗಾಗಲೇ ತಮಿಳುನಾಡು ರಾಜ್ಯದಲ್ಲಿ ಮನೆಗಳಿಗೆ ಹೊಂಚು ಹಾಕಿ 4 ಚಿನ್ನಾಭರಣ ಕಳ್ಳತನ ಪ್ರಕರಣ ದಾಖಲಾಗಿದ್ದು, ನಾಗರಕೋಯಿಲ್ ಜೈಲಿನಲ್ಲಿ ಸೆರೆವಾಸವನ್ನು ಅನುಭವಿಸಿ ಬಿಡುಗಡೆಗೊಂಡಿರುವ ಆಸಾಮಿಯಾಗಿರುತ್ತಾನೆ. ಈತನು ಅಂತರ್ ರಾಜ್ಯ ಕುಖ್ಯಾತ ಕಳ್ಳನಾಗಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ ರೈಲಿನಲ್ಲಿ ಭಾರತ ದೇಶದ ಎಲ್ಲಾ ಕಡೆ ಸುತ್ತಾಡಿಕೊಂಡು ರೈಲ್ವೇ ನಿಲ್ದಾಣದ ಬಳಿ ಆಸು ಪಾಸಿನಲ್ಲಿ ಇರುವ ದ್ವಿ ಚಕ್ರವಾಹನ ಕಳ್ಳತನ ಮಾಡಿ ಸುಲಿಗೆ ಮಾಡುತ್ತಿದ್ದನು. ನಂತರ ರೈಲಿನಲ್ಲಿ ವಿವಿಧ ಕಡೆ ಪ್ರಯಾಣ ಮಾಡಿ ತಲೆಮರೆಸಿಕೊಳ್ಳುತ್ತಿದ್ದನು. ಈತನ ಪತ್ತೆಗೆ ಪೊಲೀಸರ ವಿಶೇಷ ಪ್ರಯತ್ನದಿಂದ ಪ್ರಕರಣವು ಅತೀ ಶೀಘ್ರದಲ್ಲಿ ಭೇದಿಸಿದ್ದಾರೆ