ಮಂಗಳೂರು, ಡಿ. 05 (DaijiworldNews/AA): ದೇಶಾದ್ಯಂತ ಇಂಡಿಗೋ ವಿಮಾನ ಸೇವೆಯಲ್ಲಿ ಉಂಟಾದ ವ್ಯತ್ಯಯವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಡಿಸೆಂಬರ್ 4 ರಂದು ಆಗಮಿಸುವ ಮತ್ತು ನಿರ್ಗಮಿಸುವ ಒಟ್ಟು 10 ವಿಮಾನಗಳು ರದ್ದಾಗಿವೆ.

ಮುಂಬೈ, ನವದೆಹಲಿ ಮತ್ತು ಬೆಂಗಳೂರಿಗೆ ಹೋಗುವ ಮತ್ತು ಬರುವ ವಿಮಾನಗಳು ಗುರುವಾರ ರದ್ದಾಗಿದೆ. ಅನೇಕ ಪ್ರಯಾಣಿಕರಿಗೆ ಕೆಲವು ಗಂಟೆಗಳ ಮುಂಚಿತವಾಗಿ ಮಾಹಿತಿ ರವಾನೆ ಆದ ಕಾರಣದಿಂದ ಬಹುತೇಕರು ವಿಮಾನ ನಿಲ್ದಾಣಕ್ಕೆ ಆಗಮಿಸಲಿಲ್ಲ. ಆದರೆ ಕೊನೆಯ ಹಂತದಲ್ಲಿ ಮಾಹಿತಿ ತಿಳಿದ ಕೆಲ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾನ ರದ್ದಾದ ವಿಷಯ ತಿಳಿದು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.
ವಿಮಾನ ಸೇವೆಯಲ್ಲಿ ತೀವ್ರ ವ್ಯತ್ಯಯವಾದ ಹಿನ್ನೆಲೆ ಮುಂಗಡ ಬುಕಿಂಗ್ ಮಾಡಿದ ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ತಮ್ಮ ವಿಮಾನ ಸಂಚಾರದ ಖಚಿತತೆ ತಿಳಿದು ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದೇ ವೇಳೆ, ಮುಂಬೈ, ನವದೆಹಲಿ ಮತ್ತು ಇತರ ಸ್ಥಳಗಳಿಂದ ಆಗಮಿಸುವ ಮತ್ತು ಅಲ್ಲಿಗೆ ನಿರ್ಗಮಿಸುವ ಹಲವಾರು ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಗಳು 2-3 ಗಂಟೆಗಳ ಕಾಲ ಹಾಗೂ ಅದಕ್ಕಿಂತ ಅಧಿಕ ಸಮಯ ತಡವಾಗಿವೆ. ಒಟ್ಟು 17 ವಿಮಾನಗಳು 30 ನಿಮಿಷಗಳಿಗಿಂತ ಹೆಚ್ಚು ತಡವಾಗಿ ಮಂಗಳೂರಿನಿಂದ ಸಂಚರಿಸಿವೆ.
ಡಿಸೆಂಬರ್ 3 ರ ರಾತ್ರಿ ನವದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವು ಡಿಸೆಂಬರ್ 4 ರ ಬೆಳಿಗ್ಗೆ ಟೇಕ್ ಆಫ್ ಆಗಿದ್ದು, ಪ್ರಯಾಣಿಕರು ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲಿ ಕಾಯುವಂತಾಯಿತು. ವಿಮಾನ ಸಂಚಾರದಲ್ಲಿ ವಿಳಂಬವಾದ ಹಿನ್ನೆಲೆ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.