ಉಡುಪಿ, ಡಿ. 01 (DaijiworldNews/TA): ಆನ್ಲೈನ್ ಮೂಲಕ ಲಕ್ಷಾಂತರ ರೂ. ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 6,15,000ರೂ. ಮೌಲ್ಯದ ನಗದು, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಹಾರ ರಾಜ್ಯದ ಪಟ್ನಾ ಜಿಲ್ಲೆಯ ದೇವ್ ಹರ್ಷ(20) ಹಾಗೂ ಬಿಹಾರ ನಳಂದಾ ಜಿಲ್ಲೆಯ ಚಂದನ ಕುಮಾರ್(29) ಬಂಧಿತ ಆರೋಪಿಗಳು. ಇವರಿಂದ 97 ಸಾವಿರ ರೂ. ಮೌಲ್ಯದ 10 ಮೊಬೈಲ್ ಫೋನ್, 68,000ರೂ. ಮೌಲ್ಯದ 4 ಲ್ಯಾಪ್ಟಾಪ್ ಗಳು ಹಾಗೂ 4,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅವಿನಾಶ್ ಎಂಬವರು ರಿಲಯನ್ಸ್ ಇಂಡಸ್ಟ್ರೀ ಮಾಲಕತ್ವದ ಕ್ಯಾಂಪಾ ಕೋಲಾ ಪ್ರಾಂಚೈಸ್ ಗೆ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿದ್ದು, ಕೆಲವು ದಿನಗಳಲ್ಲಿ ಅವಿನಾಶ್ ಗೆ ಮೇಲ್ ಹಾಗೂ ಪೋನ್ ಮೂಲಕ ಹೆಚ್ಚಿನ ಮಾಹಿತಿಗಾಗಿ ಹಾಗೂ ದಾಖಲಾತಿಗಾಗಿ ಕರೆ ಬಂದಿತ್ತು.
ಅವಿನಾಶ್ ವಿದ್ಯಾಭ್ಯಾಸ, ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳನ್ನು ಕಳುಹಿಸಿದ್ದರು. ಆಗ ಅವರು ಪ್ರಾಂಚೈಸ್ ಅರ್ಜಿ ಸಲ್ಲಿಕೆ ಆಗಿರುವುದಾಗಿ ತಿಳಿಸಿದ್ದು, ಆರೋಪಿಗಳು ತಿಳಿಸಿದಂತೆ ಅವಿನಾಶ್ ರಿಜಿಸ್ಟೇಷನ್, ಪ್ರೋಡಕ್ಟ್ ಬುಕಿಂಗ್ ಗೆ ಹಂತ ಹಂತವಾಗಿ 5,72,500ರೂ. ಹಣವನ್ನು ಅಪರಿಚಿತರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದರು. ಆರೋಪಿತರು ಮತ್ತೆ ಮತ್ತೆ ಹಣ ಹಾಕುವಂತೆ ಒತ್ತಾಯಿಸುತ್ತಿದ್ದು, ಇದರಿಂದ ಅವಿನಾಶ್ ಸಂಶಯ ಉಂಟಾಯಿತು. ಆರೋಪಿಗಳು ಕ್ಯಾಂಪಾ ಕೋಲಾ ಪ್ರಾಂಚೈಸಿಯನ್ನು ಕೊಡುವುದಾಗಿ ನಂಬಿಸಿ ಒಟ್ಟು 5,72,500ರೂ. ಹಣ ಪಡೆದುಕೊಂಡು ವಂಚಿಸಿರುವುದಾಗಿ ಅವಿನಾಶ್ ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್ ತಂಡ, ಬಿಹಾರ ರಾಜ್ಯದ ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.