ಬಂಟ್ವಾಳ, ನ. 30 (DaijiworldNews/AA): ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮೂವರನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ಇಡ್ಕಿದು ನಿವಾಸಿ ಉಮೇಶ (38), ಅನಂತಾಡಿ ನಿವಾಸಿ ಅಣ್ಣು (38), ವೀರಕಂಭ ನಿವಾಸಿ ಉಮೇಶ್ (30) ಎಂಬವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಆರೋಪಿಗಳು ಅಕ್ರಮವಾಗಿ ಕೋಳಿ ಅಂಕದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಬಿ ಎಸ್ ನಾಯಕ್ ರವರು ಸಿಬ್ಬಂದಿಗಳೊಂದಿಗೆ, ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕ ಗುಡ್ಡೆಯ ಸ್ಥಳದಲ್ಲಿ ಕೆಲವರು ಗುಂಪು ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟ ಆಡುತ್ತಿದ್ದರು.
ಆರೋಪಿಗಳ ತಪಾಸಣೆಯ ವೇಳೆ ಜೂಜಾಟಕ್ಕೆ ಬಳಸಿದ್ದ ರೂ 2,100 ರೂ. ನಗದು ಪತ್ತೆಯಾಗಿದ್ದು, ಸ್ಥಳದಲ್ಲಿ ಕೋಳಿ ಅಂಕಕ್ಕೆ ಬಳಸಿದ 5 ಕೋಳಿಗಳು, ಕೋಳಿ ಅಂಕಕ್ಕೆ ಬಳಸಿದ ಕತ್ತಿ ಹಾಗೂ ದಾರಗಳು ಪತ್ತೆಯಾಗಿರುತ್ತದೆ. ಈ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು. ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.