ಉಡುಪಿ, ನ. 30 (DaijiworldNews/AA): ಪಡುಬಿದ್ರಿಯಲ್ಲಿ ಟೆಂಪೋ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ವಿದ್ಯಾರ್ಥಿನಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರನ್ನು ಪಡುಬಿದ್ರಿ ನಡ್ಸಾಲು ಬಿಲ್ಲಿತೋಟ ನಿವಾಸಿ ಪ್ರೇಕ್ಷಾ(22) ಮೃತ ದುರ್ದೈವಿ.
ಪ್ರೇಕ್ಷಾ ಅವರು ಮಂಗಳೂರು ಕಡೆಗೆ ಹೋಗುವ ಸರ್ವಿಸ್ ರಸ್ತೆಯನ್ನು ದಾಟುತ್ತಿದ್ದಾಗ, ಉಡುಪಿ ಕಡೆಯಿಂದ ಬರುತ್ತಿದ್ದ ಸರಕು ಸಾಗಣೆ ಟೆಂಪೋ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರೇಕ್ಷಾ ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಸ್ಥಳೀಯರು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೇಕ್ಷಾ ಅವರು ವಾಮಂಜೂರಿನ ಕರಾವಳಿ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ. ಅತ್ಯಂತ ಬಡ ಕುಟುಂಬಕ್ಕೆ ಸೇರಿದ ಇವರು, ಈ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಪ್ರೇಕ್ಷಾ ಅವರು ತಾಯಿ ಮತ್ತು ಹಿರಿಯ ಸಹೋದರನನ್ನು ಅಗಲಿದ್ದಾರೆ.