ಉಡುಪಿ, ನ. 30 (DaijiworldNews/AA): ಕಳೆದ ಸುಮಾರು 25 ವರ್ಷಗಳಿಂದ ಉಡುಪಿ ಮತ್ತು ಹೈದರಾಬಾದ್ ನಡುವೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ನಾನ್-ಎಸಿ ಸ್ಲೀಪರ್ ಬಸ್ ಸೇವೆಯನ್ನು ಭಾರಿ ನಷ್ಟದ ಕಾರಣದಿಂದ ಸ್ಥಗಿತಗೊಳಿಸಲಾಗಿದೆ.

ಕರಾವಳಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಹೈದರಾಬಾದ್ಗೆ ಸಂಪರ್ಕಿಸುತ್ತಿದ್ದ ಈ ಬಸ್ ಸುಮಾರು 10-15 ದಿನಗಳಿಂದ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಸತತವಾಗಿ ಹಲವು ತಿಂಗಳುಗಳಿಂದ ನಷ್ಟವನ್ನು ಅನುಭವಿಸಿದ್ದರಿಂದ ಈ ಬಸ್ ಸೇವೆಯನ್ನು ಸ್ಥಗಿತಗೊಳಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ.
ಈ ಬಸ್ ಉಡುಪಿಯಿಂದ ಮಧ್ಯಾಹ್ನ 3.30ಕ್ಕೆ ಹೊರಟು, ಕುಂದಾಪುರವನ್ನು 4 ಗಂಟೆಗೆ, ಸಿದ್ದಾಪುರವನ್ನು 4.30ಕ್ಕೆ ತಲುಪಿ, ನಂತರ ಮಾಸ್ತಿಕಟ್ಟೆ, ತೀರ್ಥಹಳ್ಳಿ, ಶಿವಮೊಗ್ಗ (ರಾತ್ರಿ 8.30), ಹರಿಹರ, ಹೊಸಪೇಟೆ ಮತ್ತು ರಾಯಚೂರು ಮೂಲಕ ಸಂಚರಿಸಿ, ಮರುದಿನ ಬೆಳಿಗ್ಗೆ 9.30ಕ್ಕೆ ಹೈದರಾಬಾದ್ ತಲುಪುತ್ತಿತ್ತು.
ದಿಢೀರ್ ಸ್ಥಗಿತದಿಂದ ಕರಾವಳಿಯಿಂದ ಹೈದರಾಬಾದ್ಗೆ ಸಂಚರಿಸಲು ಈ ಬಸ್ ಅವಲಂಬಿಸಿದ್ದ ಅನೇಕ ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ. ಹೋಟೆಲ್ ಕೆಲಸಗಾರರು ಮತ್ತು ದೂರ ಪ್ರಯಾಣಕ್ಕಾಗಿ ಈ ಸೇವೆಯನ್ನು ಅವಲಂಬಿಸಿದ್ದ ಕರಾವಳಿ ಜಿಲ್ಲೆಗಳ ನಿವಾಸಿಗಳು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿಯೂ ಸಂಚರಿಸುತ್ತಿದ್ದ ಈ ಬಸ್, ಈಗ ಸೀಸನ್ ಆರಂಭದಲ್ಲಿ ಸ್ಥಗಿತಗೊಳಿಸಿರುವುದು ಸರಿಯಲ್ಲ. ಈ ಬಸ್ ಸೇವೆಯನ್ನು ಪುರ್ನ ಆರಂಭಿಸುವಂತೆ ಸಿದ್ದಾಪುರ ಮತ್ತು ಹೊಸಂಗಡಿ ಭಾಗದ ಪ್ರಯಾಣಿಕರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.
ಮೂಲಗಳ ಪ್ರಕಾರ, ಈ ಅಂತಾರಾಜ್ಯ ಬಸ್ ಸೇವೆಯನ್ನು ಸ್ಥಗಿತಗೊಳಿಸಲು ಭಾರೀ ನಷ್ಟವೇ ಕಾರಣ ಎನ್ನಲಾಗಿದೆ. ಅಂತಾರಾಜ್ಯ ಬಸ್ ಅನ್ನು ನಿರ್ವಹಿಸಲು ಕೆಎಸ್ಆರ್ಟಿಸಿಗೆ ಪ್ರತಿ ಕಿಲೋಮೀಟರ್ಗೆ ಸುಮಾರು 45-49 ರೂ. ಖರ್ಚಾಗುತ್ತದೆ. ಆದರೆ ಈ ಸೇವೆಯಿಂದ ಪ್ರತಿ ಕಿಲೋಮೀಟರ್ಗೆ 30 ರೂ.ಗಳಿಗಿಂತ ಕಡಿಮೆ ಆದಾಯ ಬರುತ್ತಿತ್ತು. ಇದರಿಂದ ಪ್ರತಿ ಕಿಲೋಮೀಟರ್ಗೆ 20-25 ರೂ. ನಷ್ಟವಾಗುತ್ತಿತ್ತು. ಅಂತಾರಾಜ್ಯ ಬಸ್ಗಳಿಗೆ ಕನಿಷ್ಠ ಪ್ರತಿ ಕಿಲೋಮೀಟರ್ಗೆ 55 ರೂ. ಆದಾಯದ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿತ್ತು. ಉಡುಪಿಯಿಂದ ಶಿವಮೊಗ್ಗದವರೆಗೆ ಬಹುತೇಕ ಪ್ರಯಾಣಿಕರು ಇರುತ್ತಿರಲಿಲ್ಲ. ಶಿವಮೊಗ್ಗದಿಂದ ಮುಂದೆ ಕೆಲವರು ಮಾತ್ರ ಹತ್ತುತ್ತಿದ್ದರು. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಭಾರಿ ನಷ್ಟ ಉಂಟಾದ ಕಾರಣ, ಬೆಂಗಳೂರಿನ ಕೇಂದ್ರ ಕಚೇರಿಯಿಂದ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈ ಬಸ್ ಅನ್ನು ಶಿವಮೊಗ್ಗಕ್ಕೆ ವರ್ಗಾಯಿಸಿ, ಶಿವಮೊಗ್ಗ-ಹೈದರಾಬಾದ್ ಮಾರ್ಗದಲ್ಲಿ ಓಡಿಸಲು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದ್ದಾರೆ.
ಈ ಬಸ್ ಸೇವೆಯನ್ನು ಪುನರಾರಂಭಿಸಬೇಕು ಎಂಬ ಸಾರ್ವಜನಿಕರ ಬೇಡಿಕೆ ಹೆಚ್ಚಿದ್ದು, 25 ವರ್ಷಗಳಷ್ಟು ಹಳೆಯದಾದ ಮಾರ್ಗವನ್ನು ದಿಢೀರನೆ ಸ್ಥಗಿತಗೊಳಿಸಿದ ಹಿಂದೆ ಖಾಸಗಿ ಸಾರಿಗೆ ಲಾಬಿ ಇರಬಹುದು ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರು ಸಾರಿಗೆ ಸಚಿವರಿಗೆ ಈ ಸೇವೆಯನ್ನು ಆದಷ್ಟು ಬೇಗ ಪುನರಾರಂಭಿಸಲು ಮನವಿ ಮಾಡಿದ್ದಾರೆ.