ಮಂಗಳೂರು, ನ. 30 (DaijiworldNews/TA): ರಾಜ್ಯ ಸರಕಾರದ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿಉಚಿತ ಪ್ರಯಾಣದ ಗ್ಯಾರಂಟಿ ಜಾರಿಗೊಳಿಸಿದೆ. ಆದರೆ ಈ ಗ್ಯಾರಂಟಿ ಯೋಜನೆ ಮಹಿಳಾ ಮೀಸಲು ಸೀಟುಗಳಿಗೆ ಸಂಚಕಾರ ತಂದಿದೆ. ಇಂದು ಬೆಳಗ್ಗೆ 8 ಗಂಟೆಗೆ ಮಂಗಳೂರಿಂದ ಮೈಸೂರಿಗೆ ತೆರಳುವ ಬಸ್ ನಲ್ಲಿ (KA.19, F-3196) ನಡೆದ ಘಟನೆ. ಬಸ್ ನಲ್ಲಿ ಆಸನಗಳು ಖಾಲಿ ಇದ್ದರು ಮಹಿಳಾ ಮೀಸಲು ಸೀಟ್ ನಲ್ಲಿ ಪುರುಷ ಪ್ರಯಾಣಿಕರು ಕುಳಿತಿದ್ದರು.

ಈ ಬಗ್ಗೆ ಬಸ್ ನಿರ್ವಾಹಕರ ಗಮನ ಸೆಳೆದು, ಮಹಿಳಾ ಆಸನದಲ್ಲಿ ಕುಳಿತಿರುವ ಪ್ರಯಾಣಿಕರನ್ನು ಬೇರೆಡೆ ಕುಳಿತುಕೊಳ್ಳುವಂತೆ ಸೂಚಿಸಲು ಕೇಳಿದಾಗ ನಿರ್ವಾಹಕ ಅತ್ಯಂತ ಬೇಜಾವಾಬ್ದಾರಿಯಿಂದ ಉತ್ತರಿಸಿದರು ಎಂದು ಆರೋಪಿಸಿದ್ದಾರೆ. ಈ ಆರೋಪದ ಪ್ರಕಾರ, “ ಮಹಿಳೆಯರು ರಾಜ್ಯದಲ್ಲಿ ಉಚಿತವಾಗಿ ಪ್ರಯಾಣಿಸುತ್ತಿರುವುದು. ಫ್ರೀ ಬಸ್ ಯೋಜನೆ ಬಂದ ಮೇಲೆ ಮಹಿಳಾ ಮೀಸಲು ಆಸನದ ವ್ಯವಸ್ಥೆ ಇಲ್ಲ. ಖಾಲಿ ಇರವ ಕಡೆ ಕುಳಿತುಕೊಳ್ಳಿ “ ಎಂದು ಉಡಾಫೆಯಿಂದ ಉತ್ತರಿಸಿದರು ಎನ್ನಲಾಗಿದೆ.
ಮಹಿಳೆ ವಿನಯಪೂರ್ವಕವಾಗಿ, “ಇದು ಮಹಿಳೆಯರಿಗೆ ಮೀಸಲಾಗಿರುವ ಸೀಟ್. ದಯವಿಟ್ಟು ಬೇರೆ ಸೀಟ್ಗೆ ಬನ್ನಿ” ಎಂದು ಕೇಳಿದಾಗ, ಆ ಪುರುಷ ಪ್ರಯಾಣಿಕ ಸಹ ತಿರಸ್ಕಾರದ ಭಾವದಲ್ಲಿ ಪ್ರತಿಕ್ರಿಯಿಸಿದನೆಂಬ ಮಾಹಿತಿಯಿದೆ. ಪರಿಸ್ಥಿತಿ ಗಂಭೀರವಾಗದಂತೆ ನೋಡಿಕೊಳ್ಳಬೇಕಾದ ನಿರ್ವಾಹಕ ಸಹ ಪುರುಷ ಪ್ರಯಾಣಿಕನ ಮಾತಿಗೆ ದನಿಗೂಡಿಸಿದರು ಎಂಬುದು ಆರೋಪ.
ಈ ಘಟನೆಯ ನಂತರ ಅನೇಕರು, ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಅವರಿಗೆ ನೀಡಿರುವ ಹಕ್ಕುಗಳನ್ನು ಗೌರವಿಸುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ವಾಹಕನ ತಾತ್ಸಾರ ನಡೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ.