ಮಂಗಳೂರು, ನ. 30 (DaijiworldNews/AA): ನಗರದ ಉರ್ವ ಮಾರ್ಕೆಟ್ ಬಳಿಯ ವಸತಿ ಸಮುಚ್ಚಯವೊಂದರ ಮಹಡಿ ಮೇಲಿನ ಮನೆಯಲ್ಲಿ ಶುಕ್ರವಾರ ತಡರಾತ್ರಿ ಹಠಾತ್ ಅಡುಗೆ ಅನಿಲ ಸೋರಿಕೆ ಉಂಟಾಗಿದ್ದು, ಮನೆಯವರ ಸಮಯ ಪ್ರಜ್ಞೆ ಹಾಗೂ ಕದ್ರಿ ಅಗ್ನಿಶಾಮಕ ದಳದ ತುರ್ತು ಸ್ಪಂದನೆಯಿಂದಾಗಿ ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ.

ಮನೆ ಮಾಲೀಕರಾದ ಪ್ರಶಾಂತ್ ನಾಯಕ್ ಅವರಿಗೆ ಅಡುಗೆ ಕೋಣೆಯಿಂದ ಏನೋ ಸದ್ದು ಕೇಳಿದಂತಾಗಿ ಎಚ್ಚರವಾಗಿದೆ. ಪರಿಶೀಲಿಸಿದಾಗ, ಅವರಿಗೆ ಅಡುಗೆ ಅನಿಲ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. ಅವರು ತಕ್ಷಣವೇ ತಮ್ಮ ತಾಯಿ, ಪತ್ನಿ ಮತ್ತು ಮಗುವನ್ನು ಕೆಳಗೆ ತೆರೆದ ಪ್ರದೇಶಕ್ಕೆ ಕರೆದೊಯ್ದು ನೆರೆಹೊರೆಯವರಿಗೆ ವಿಷಯ ತಿಳಿಸಿದರು. ಪಕ್ಕದ ಮನೆಯಲ್ಲಿರುವ ಸ್ನೇಹಿತರೊಬ್ಬರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲಿಸಿದಾಗ ಗ್ಯಾಸ್ ಸಿಲಿಂಡರ್ನ ರೆಗ್ಯುಲೇಟರ್ ತುಂಡಾಗಿರುವುದು ಕಂಡುಬಂದಿತು. ಅವರು ಕಷ್ಟಪಟ್ಟು ಅದನ್ನು ತೆಗೆದುಹಾಕಿ, ಸೋರಿಕೆಯನ್ನು ನಿಲ್ಲಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಮುನ್ನೆಚ್ಚರಿಕೆಯಾಗಿ ಅಪಾರ್ಟ್ಮೆಂಟ್ನ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟಿದ್ದರಿಂದ ಯಾವುದೇ ದೊಡ್ಡ ಅಪಾಯ ಸಂಭವಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇವಲ ಎರಡು ದಿನಗಳ ಹಿಂದೆ ಹೊಸ ಗ್ಯಾಸ್ ಸಿಲಿಂಡರ್ ಅಳವಡಿಸಲಾಗಿತ್ತು ಮತ್ತು ಅದು ತುಂಬಿತ್ತು. ರೆಗ್ಯುಲೇಟರ್ ಸ್ವಿಚ್ ಅನ್ನು ಆಫ್ ಮಾಡಿರಲಿಲ್ಲ. ಇದ್ದಕ್ಕಿದ್ದಂತೆ, ರೆಗ್ಯುಲೇಟರ್ನ ಮೋಲ್ಡಿಂಗ್ ತುಂಡಾಗಿ ದೊಡ್ಡ ಶಬ್ದದೊಂದಿಗೆ ಅನಿಲ ಸೋರಿಕೆ ಪ್ರಾರಂಭವಾಗಿದೆ. ಮನೆಯ ಮಾಲೀಕರು ಎಚ್ಚರಗೊಳ್ಳದಿದ್ದರೆ ದೊಡ್ಡ ದುರಂತ ಸಂಭವಿಸಬಹುದಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ. ರೆಗ್ಯುಲೇಟರ್ ತುಂಡಾಗಲು ನಿಖರ ಕಾರಣ ತಿಳಿದುಬಂದಿಲ್ಲ.
ಕದ್ರಿ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಕೆ. ವಿ. ಗೌಡ, ಪ್ರಮುಖ ಅಗ್ನಿಶಾಮಕ ಸಿಬ್ಬಂದಿ ಚಂದ್ರಹಾಸ ಸಾಲ್ಯಾನ್, ಚಾಲಕ ಪ್ರಭು ಮಹಾದೇವ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಪುನೀತ್ ಹಾಗೂ ಕಾರ್ತಿಕ್ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.