ಬಂಟ್ವಾಳ, ನ. 30 (DaijiworldNews/TA): ಉಳಿಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಕಕ್ಯಪದವು ಮೈರ-ಬರ್ಕೆಜಾಲು ಎಂಬಲ್ಲಿ ನಡೆಯುವ 13 ನೇ ವರ್ಷದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಬೆಳಗ್ಗೆ ಅದ್ದೂರಿಯ ಚಾಲನೆ ನೀಡಲಾಯಿತು.

ವೇ.ಮೂ.ರಾಘವೇಂದ್ರ ಭಟ್ ಕೊಡಂಬೆಟ್ಟು ಅವರ ಮಾರ್ಗದರ್ಶನದಲ್ಲಿ ವಾಸುದೇವ ಆಚಾರ್ಯ ಅವರು ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು. ಹೈದರಾಬಾದ್ ಎಂಇಪಿ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಚಂದ್ರಶೇಖರ ಡೆಚ್ಚಾರು ಮತ್ತು ಕಂಬಳಕೋಣಗಳ ಯಜಮಾನ ತನಿಯಪ್ಪ ಗೌಡ ಪೆಂರ್ಗಾಲು ಅವರು ಸತ್ಯ-ಧರ್ಮ ಜೋಡುಕರೆಯನ್ನು ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ರಾಮಯ್ಯ ಭಂಡಾರಿ ಪುಣ್ಕೆದಡಿ ಮತ್ತು ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಗನ್ನಾಥ ಬಂಗೇರ ನಿರ್ಮಲ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ರಾಮಾಂಜನೇಯ ಗೆಳೆಯರ ಬಳಗದ ಯುವಕರ ಕಾರ್ಯಅಭಿನಂದನೀಯ . ಕಂಬಳಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು. ಮುಖ್ಯ ಅತಿಥಿಯಾಗಿ ಭಗವಹಿಸಿ ಮಾತನಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು, ತುಳುವರ ನಂಬಿಕೆಯ, ತುಳುನಾಡ ಮಣ್ಣಿನ ಸಂಸ್ಕೃತಿಯಾದ ಕಂಬಳ ಕ್ರೀಡೆಯನ್ನು ಉಳಿಸಿ, ಬೆಳೆಸುವಲ್ಲಿ ಕಂಬಳ ಸಂಘಟಿಸಿದ ರಾಮಾಂಜನೇಯ ಗೆಳೆಯರ ಬಳಗ ಅಭಿನಂದನೀಯರು.