ಗುರುಪುರ, ನ. 30 (DaijiworldNews/TA): ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಪದ್ಮನಾಭ ಕೋಟ್ಯಾನ್ ಅಧಿಕಾರ ಸ್ವೀಕಾರ , ಬ್ಲಾಕ್ ಕಾಂಗ್ರೆಸ್ನ ನೂತನ ಕಚೇರಿ ಉದ್ಘಾಟನೆ ಸಮಾರಂಭ ಶುಕ್ರವಾರ ಗುರುಪುರ ಕೈಕಂಬದ ಪೊಳಲಿ ಕ್ರಾಸ್ನ ಜಯಲಕ್ಷ್ಮೀ ಸಂಕೀರ್ಣದ ಬಳಿ ನಡೆಯಿತು.


ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜನರನ್ನು ದಾರಿ ತಪ್ಪಿಸುತ್ತಾ ಎದುರಾಳಿ ಬಿಲಿಷ್ಠವಾಗುತ್ತಿದ್ದಾರೆ. ಕೋಮುವಾದವನ್ನು ಹರಡಿ ಅಧಿಕಾರ ಹಿಡಿಯುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಗುರುಪುರ ಕಾಂಗ್ರೆಸ್ನ ಗಟ್ಟಿ ನೆಲ. ಇದು ರಮಾನಾಥ ರೈಯವರ ನಾಲ್ಕು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರದೇಶ. ಗುರುಪುರ, ಕೈಕಂಬದಲ್ಲಿ ಕಾಂಗ್ರೆಸ್ನ ಗತ ವೈಭವ ಮತ್ತೆ ಮೇಲೈಸಲಿದೆ ಎಂದರು, ದ.ಕ. ಜಿಲ್ಲೆಯಲ್ಲಿ ಆರೋಗ್ಯ ಕ್ರಾಂತಿಯಾಗುತ್ತಿದೆ. ಅಶಾಂತಿಯಲ್ಲಿದ್ದ ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪಿಸಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದ ಇನಾಯತ್ ಅಲಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಗುರುಪುರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಸುಧೀರ್ ಮುರೊಳ್ಳಿ ಮತ್ತಿತರರು ಮಾತನಾಡಿದರು. ಇದೇ ವೇಳೆ ಬ್ಲಾಕ್ನ ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಕಂಬಳಿಯವರು ನೂತನ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ರಿಗೆ ಅಧಿಕಾರ ಹಸ್ತಾಂತರಿಸಿದರು. ಕೋಟ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ವಿವಿಧ ಪಕ್ಷಗಳ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಕ್ಷದ ಮುಖಂಡರಾದ ಪದ್ಮರಾಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.