ಸುಳ್ಯ, ನ. 30 (DaijiworldNews/TA): ಮರಾಟಿ ಸಮುದಾಯದ ಕುಟುಂಬಗಳಲ್ಲಿ ನಡೆದುಕೊಂಡು ಬರುತ್ತಿರುವ ಪ್ರಮುಖ ಆರಾಧನೆಯಾಗಿರುವ ಶ್ರೀ ಮಹಮಾಯಿ ದೇವಿಯ ಗೋಂದೋಳು ಪೂಜೆ ಸಹಿತ, ಮದುವೆ, ಇನ್ನಿತರ ಆಚಾರ ವಿಚಾರಗಳು ಏಕರೂಪದಲ್ಲಿರಬೇಕೆಂಬ ಕಾರಣಕ್ಕೆ ರಚಿತವಾಗಿರುವ 'ಗೋಂದೋಳು ಪೂಜೆಯ ಹಿನ್ನಲೆ, ಆಚರಣೆಯ ವಿಧಿವಿಧಾನಗಳು ಮತ್ತು ಇತರ ಪ್ರಮುಖ ಆಚರಣೆಗಳು' ಪುಸ್ತಕ ಡಿ.7 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಪುಸ್ತಕದ ಪ್ರಧಾನ ಸಂಪಾದಕ ಗೋಪಾಲ ನಾಯ್ಕ ಮತ್ತು ಮರಾಟಿ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ತಿಳಿಸಿದ್ದಾರೆ.

ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 1 ಕಳೆದ ಮೂರು ವರ್ಷಗಳ ಹಿಂದೆ ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಮರಾಟ ಧಾರ್ಮಿಕ ಚಿಂತನಾ ಸಮಿತಿಯನ್ನು ರಚಿಸಿಕೊಂಡು ಈ ಪುಸ್ತಕ ರಚಿಸಲ್ಪಟ್ಟಿದೆ. ಇದರ ಅಧ್ಯಕ್ಷರಾದ ಸಂಘದ ಮಾಜಿ ಅಧ್ಯಕ್ಷರಾದ ಗೋಪಾಲ ನಾಯ್ಕ ದೊಡೇರಿಯವರ ಪ್ರಧಾನ ಸಂಪಾದಕತ್ವದಲ್ಲಿ 12 ಮಂದಿ ಸದಸ್ಯರನ್ನು ಒಳಗೊಂಡ ಸಂಪಾದಕೀಯ ಮಂಡಳಿ ರಚಿಸಿಕೊಂಡು ಮಾಹಿತಿ ಕಲೆಹಾಕಲಾಗಿದೆ.
ಸುಳ್ಯ, ಪುತ್ತೂರು, ಕಡಬ, ಬಂಟಾಳ, ಕಾಸರಗೋಡು ಮೊದಲಾದ ಕಡೆ ಗೋಂದೋಳು ಪೂಜೆ ಮಾಡುವ ಪೂಜಾರಿಗಳನ್ನು, ಸಮಾಜದ ಹಿರಿಯರನ್ನು ಸಂದರ್ಶಿಸಿ, ಮಾಹಿತಿ ಕ್ರೋಢೀಕರಿಸಿ ಪುಸ್ತಕ ರಚಿಸಲಾಗಿದೆ. ಮರಾಟಿ ಸಮಾಜ ಸೇವಾ ಸಂಘದ ಮರಾಟ ಧಾರ್ಮಿಕ ಚಿಂತನಾ ಸಮಿತಿ ವತಿಯಿಂದ ರಚಿಸಲ್ಪಟ್ಟ ಪುಸ್ತಕದ ಬಿಡುಗಡೆ ಮತ್ತು ವಾರ್ಷಿಕೋತ್ಸವ ಡಿ.7 ರಂದು ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ಪೂ.10 ರಿಂದ ನಡೆಯಲಿದೆ ಎಂದರು.