ಉಡುಪಿ, ನ. 29 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೃಷ್ಣನಗರಿ ಉಡುಪಿಗೆ ಆಗಮಿಸಿ ಲಕ್ಷಕಂಠ ಭಗವದ್ಗೀತಾ ಶ್ಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ, ಉಡುಪಿಯ ಕೃಷ್ಣಮಠದ ಕನಕನ ಕಿಂಡಿಯ ಸ್ವರ್ಣ ಕವಚದ ಉದ್ಘಾಟನಾ ಕಾರ್ಯಕ್ರಮವೂ ನಡೆಯಿತು. ಆದರೆ ಈ ಉದ್ಘಾಟನೆಯ ವೇಳೆ ಸ್ವರ್ಣ ಕವಚಕ್ಕೆ ದಾನ ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಆಹ್ವಾನಿಸದಿರುವುದು ಕರಾವಳಿ ನಗರದ ಭಕ್ತರು ಮತ್ತು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.





ಐತಿಹಾಸಿಕವಾಗಿ, ಕನಕನ ಕಿಂಡಿಗೆ ಸ್ವರ್ಣ ಕವಚದ ಕೊಡುಗೆ ಪ್ರಮೋದ್ ಮಧ್ವರಾಜ್ ಅವರದ್ದಾಗಿತ್ತು, ಮತ್ತು ದಶಕಗಳ ಹಿಂದೆ ಅವರ ತಂದೆ ಮಲ್ಪೆ ಮಧ್ವರಾಜ್ ಕನಕನ ಗುಡಿಯನ್ನು ನಿರ್ಮಿಸಿದ್ದರು. ಈ ಬಾರಿ ಗುಡಿ ಮರು ನಿರ್ಮಾಣಗೊಂಡು ಚಿನ್ನದ ಕವಚದ ಕೊಡುಗೆ ಪ್ರಮೋದ್ ಮಧ್ವರಾಜ್ ಮಾಡಿರುವುದರಿಂದ, ದಾನ ನೀಡಿದವರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡದೇ ಇರೋದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಕೆಲವರು “ಅಂದು ಕನಕದಾಸರನ್ನು ಬಿಡಲಿಲ್ಲ, ಇಂದು ಪ್ರಮೋದ್ ಅವರನ್ನು ಕರೆಯಲಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದ ಚರ್ಚೆಗೆ ಪ್ರತಿಕ್ರಿಯಿಸುತ್ತ ಪ್ರಸ್ತುತ ಪ್ರಮೋದ್ ಮಧ್ವರಾಜ್ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಕನಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಿನ್ನದ ಕವಚ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಗದಿರುವುದು ದೊಡ್ಡ ವಿಷಯವಲ್ಲ. ಪ್ರದೇಶಕ್ಕೆ ಬೇರೆ ಬೇರೆ ಕಾರಣಗಳಿಂದ ನನಗೆ ಹೋಗಲು ಅವಕಾಶ ಸಿಗಲಿಲ್ಲ. ಸ್ವರ್ಣಮಯ ಕವಚ ನಿರ್ಮಾಣ ಮಾಡುವಾಗ ಮೋದಿಯವರು ಬರುವ ಕಾರ್ಯಕ್ರಮ ನಿಗದಿಯಾಗಿರಲಿಲ್ಲ. ಮೋದಿಯವರು ಬರುವ ಕಾರ್ಯಕ್ರಮ ನಿಗದಿಯಾದಾಗ ಸ್ವಾಮೀಜಿ ಉದ್ಘಾಟನೆಗೆ ವ್ಯವಸ್ಥೆ ಮಾಡಿದರು. ನನ್ನ ತಂದೆ ನಿರ್ಮಿಸಿದ ಕನಕನ ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಿದ್ದಾರೆ. ಇದು ಕೊನೆಯ ಗಳಿಗೆಯಲ್ಲಿ ನಿರ್ಧಾರವಾದ ಕಾರ್ಯಕ್ರಮ. ಪ್ರಧಾನಿ ಮೋದಿಯವರಿಗೆ ದೇವರು ಬುದ್ಧಿ ಕೊಟ್ಟು ಗೌರವಾರ್ಪಣೆ ಮಾಡಿದ್ದಾರೆ. ಸ್ವಾಮೀಜಿಯವರು ಹೇಳಿದ ಮಾತನ್ನು ಉಳಿಸಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.
ಈ ಸಂತೋಷದ ಮುಂದೆ, ಆಹ್ವಾನ ನೀಡದಿರುವುದು ವಿಷಯವೇ ಅಲ್ಲ. ಬೇಸರ ದುಮ್ಮಾನ ಜಿಗುಪ್ಸೆ ಏನೂ ಆಗಿಲ್ಲ. ಟಿವಿಯಲ್ಲಿ ಅರ್ಪಣೆಯ ದೃಶ್ಯ ನೋಡಿ ಸಂತೋಷ ಪಟ್ಟಿದ್ದೇನೆ. ನನಗೆ ಪ್ರವೇಶ ಯಾರಿಂದ, ಯಾಕಾಗಿ ನಿಷೇಧಿಸಲ್ಪಟಿತು ಅನ್ನೋದು ಗೊತ್ತಿಲ್ಲ. ಇವೆಲ್ಲ ಕ್ಷುಲ್ಲಕ ವಿಚಾರಗಳು, ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೋದಿ ಅವರೇ ಬಂದು ನನ್ನ ಮತ್ತು ತಂದೆಯ ಸೇವೆಯನ್ನು ಸ್ಪರ್ಶಿಸಿದ್ದಾರೆ. ಇದಕ್ಕಿಂತ ಬೇರೆ ಖುಷಿ ನನಗೆ ಬೇಡ. ಅಷ್ಟು ಜನರನ್ನು ಕರೆದಾಗ ನನ್ನನ್ನು ಕರೆಯಲು ಅವಕಾಶ ಇಲ್ಲದೇ ಇರಬಹುದು. ಯಾವ ಕಾರಣಕ್ಕಾಗಿ ಕರೆದಿಲ್ಲ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.
“ಕನಕದಾಸರ ಭಕ್ತಿಯ ಶಕ್ತಿ ಎದುರು ನಾನು ಕ್ಷುಲ್ಲಕ. ನನಗೆ ಯಾವುದೇ ಅವಮಾನ ಆಗಿಲ್ಲ, ಬದಲಾಗಿ ಗೌರವವಾಗಿದೆ. ಬಿಜೆಪಿ ನನ್ನನ್ನು ಏಕೆ ಕರೆಯಲಿಲ್ಲ ಎಂಬುದು ಪಕ್ಷದ ವಿಷಯ. ನಾನು ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಎಲ್ಲಾ ಕಾರ್ಯಗಳನ್ನು ಫಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದೇನೆ. ಮುಂದಿನದು ಕೃಷ್ಣ ಕನಕದಾಸರಿಗೆ ಬಿಟ್ಟ ವಿಚಾರ. ರೋಡ್ ಶೋಗೆ ಹೋಗದೇ ಮನೆಯಲ್ಲಿ ಟಿವಿಯಲ್ಲಿ ಕಾರ್ಯಕ್ರಮವನ್ನೇ ನೋಡುವ ಮೂಲಕ ಸಂತೋಷಪಟ್ಟಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು.