ಕಾಸರಗೋಡು, ನ. 29 (DaijiworldNews/AA): ಶಬರಿಮಲೆ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು ಓರ್ವ ಮೃತಪಟ್ಟು, 46 ಮಂದಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಚಿತ್ತಾರಿಕಾಲ್ ಸಮೀಪದ ಮಾಲೋ ಕುಟ್ಟಿ ಕಾವಳ ಎಂಬಲ್ಲಿ ನಡೆದಿದೆ.


ಮೃತಪಟ್ಟವರನ್ನ್ಯು ಮೈಸೂರು ಚುಂಚನಕಟ್ಟೆ ಹರೀಶ್ (36) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರಿನಿಂದ ಶಬರಿಮಲೆ ದರ್ಶನ ಮುಗಿಸಿ ಮರಳುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 2.50 ರ ಸುಮಾರಿಗೆ ಈ ಅಪಘಾತ ನಡೆದಿದೆ. ಕುಟ್ಟಿ ಕಾವಳ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬಸ್ಸು 30 ಅಡಿ ಆಳಕ್ಕೆ ಬಿದ್ದಿದೆ.
ಬಸ್ಸಿನಲ್ಲಿ ಒಟ್ಟು 56 ಯಾತ್ರಾರ್ಥಿಗಳಿದ್ದು, ಈ ಪೈಕಿ ಆರು ಮಕ್ಕಳು ಎನ್ನಲಾಗಿದೆ. ನಾಗರಿಕರು ಹಾಗೂ ಪೊಲೀಸರು ಗಾಯಾಳುಗಳನ್ನು ಪರಿಯಾರಂ, ಚೆರುಪ್ಪುಯ, ಪಯ್ಯನ್ನೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ 2 ಮಂದಿಯನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆ, ನಾಲ್ಕು ಮಂದಿಯನ್ನು ಚೆರುಪ್ಪುಯ ಸಹಕಾರಿ ಆಸ್ಪತ್ರೆ, 20 ಮಂದಿಯನ್ನು ಚೆರುಪ್ಪುಯ ಸೈ೦ಟ್ ಸೆಬಾಸ್ಟಿಯನ್ ಆಸ್ಪತ್ರೆಗೆ ದಾಖಲಿಸಲಾಗಿದೆ.