ಮಂಗಳೂರು, ನ. 29 (DaijiworldNews/AA): ಇಂಡಿಗೋ ವಿಮಾನಯಾನ ಸಂಸ್ಥೆಯು ಕ್ರಿಸ್ಮಸ್ ದಿನದಂದು (ಡಿಸೆಂಬರ್ 25) ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತು ನೂತನವಾಗಿ ಉದ್ಘಾಟನೆಗೊಂಡ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ ನೇರ ವಿಮಾನ ಸೇವೆಯನ್ನು ಪ್ರಾರಂಭಿಸಲಿದೆ.

ಈ ಮೂಲಕ ಮಂಗಳೂರು - ಮುಂಬೈ ಮಾರ್ಗವು ಪ್ರಯಾಣಿಕರಿಗೆ ಪ್ರತಿದಿನ ಒಟ್ಟು ಐದು ವಿಮಾನಗಳ ಆಯ್ಕೆಯನ್ನು ಒದಗಿಸಲಿದೆ. ಇವುಗಳಲ್ಲಿ ನಾಲ್ಕು ಇಂಡಿಗೋದಿಂದ ಮತ್ತು ಒಂದು ಏರ್ ಇಂಡಿಯಾ ಎಕ್ಸ್ಪ್ರೆಸ್ನಿಂದ ಕಾರ್ಯನಿರ್ವಹಿಸಲಿವೆ. ಅಕ್ಟೋಬರ್ 2025 ರಲ್ಲಿ ಕಾರ್ಯಾಚರಣೆ ಆರಂಭಿಸಿದ ಈ ಅತ್ಯಾಧುನಿಕ ವಿಮಾನ ನಿಲ್ದಾಣವು ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಸೇರ್ಪಡೆಯಾಗಿದೆ. ಈ ಹೊಸ ಕೇಂದ್ರಕ್ಕೆ ಆರಂಭಿಕ ಸಂಪರ್ಕ ಕಲ್ಪಿಸುವ ದೇಶದ ಕೆಲವು ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಕೂಡ ಒಂದಾಗಿದೆ.
ನವಿ ಮುಂಬೈಗೆ ತೆರಳುವ ಈ ಹೊಸ ಮಾರ್ಗವು ವ್ಯವಹಾರ ಮತ್ತು ಇತರೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ಮೂಲಕ ಸಂಪರ್ಕವನ್ನು ಹೆಚ್ಚಿಸಲಿದೆ. ಪ್ರಸ್ತುತ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ ಮತ್ತು ತಿರುವನಂತಪುರಂಗೆ ಸಂಪರ್ಕವನ್ನು ಒದಗಿಸುತ್ತದೆ. ಇದೀಗ ನವಿ ಮುಂಬೈ ಇದಕ್ಕೆ ಸೇರ್ಪಡೆಯಾಗಲಿರುವ ದೇಶದ ಏಳನೇ ಸ್ಥಳವಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (MgIAL) ಬಗ್ಗೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಜಾಗತಿಕವಾಗಿ ವೈವಿಧ್ಯಮಯವಾದ ಅದಾನಿ ಸಮೂಹದ ಪ್ರಮುಖ ಕಂಪನಿಯಾದ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ನ ಅಂಗಸಂಸ್ಥೆಯಾಗಿದೆ. ಇದು ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮೂಲಕ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಏಳು ವಿಮಾನ ನಿಲ್ದಾಣಗಳ ಅತಿದೊಡ್ಡ ಖಾಸಗಿ ನಿರ್ವಾಹಕವಾಗಿದೆ. MgIAL ನಲ್ಲಿ AAHL 49% ಪಾಲನ್ನು ಹೊಂದಿದ್ದರೆ, AEL ಕಂಪನಿ 51% ಪಾಲನ್ನು ಹೊಂದಿದೆ. MgIAL, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪ್ರಮುಖ ವಿಮಾನಯಾನ ಕೇಂದ್ರವಾದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು (IATA: IXE ICAO: VOML)
70 ವರ್ಷಗಳಿಗಿಂತ ಹೆಚ್ಚು ಸುದೀರ್ಘ ಇತಿಹಾಸವನ್ನು ಹೊಂದಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 583.77 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಪ್ರಯಾಣಿಕರ ದಟ್ಟಣೆಯ ವಿಷಯದಲ್ಲಿ ಕರ್ನಾಟಕದ ಎರಡನೇ ಅತಿ ಹೆಚ್ಚು ಜನನಿಬಿಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಂಗಳೂರು ವಿಮಾನ ನಿಲಾಣವು 2024-25ರ ಹಣಕಾಸು ವರ್ಷದಲ್ಲಿ 2.32 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. ಕಾಂಕ್ರೀಟ್ನಿಂದ ನಿರ್ಮಿಸಿದ ಮತ್ತು ಡಾಂಬರಿನಿಂದ ನಿರ್ಮಿಸಿದ ಒಂದು ರನ್ವೇ ಸೇರಿದಂತೆ ಎರಡು ರನ್ವೇಗಳನ್ನು ಹೊಂದಿರುವ ಕರ್ನಾಟಕದ ಮೊದಲ ವಿಮಾನ ನಿಲ್ದಾಣ ಇದಾಗಿದೆ. ಪ್ರಸ್ತುತ ವಿಮಾನ ನಿಲ್ದಾಣವು ಪ್ರತಿದಿನ 55 ಕ್ಕೂ ಹೆಚ್ಚು ವಿಮಾನ ಸಂಚಾರಗಳನ್ನು ನಿರ್ವಹಿಸುತ್ತದೆ.
ಡಿಜಿಟಲ್-ಮೊದಲ ವಿಧಾನವನ್ನು ಅನುಸರಿಸುವ ಈ ವಿಮಾನ ನಿಲ್ದಾಣವು ಸುಧಾರಿತ ತಂತ್ರಜ್ಞಾನ ಮತ್ತು ದಕ್ಷ ಕಾರ್ಯಾಚರಣೆಗಳ ಮೂಲಕ ಪ್ರಯಾಣಿಕರಿಗೆ ಸುಗಮ ಅನುಭವವನ್ನು ನೀಡುತ್ತದೆ. ಉದಯೋನ್ಮುಖ ಕಾರ್ಗೋ ಕೇಂದ್ರವಾಗಿ, IXE ವಾರ್ಷಿಕವಾಗಿ 5,600 ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ವಾಯು ಸರಕುಗಳನ್ನು ನಿರ್ವಹಿಸುತ್ತದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 5 ಮಿಲಿಯನ್ ಪ್ರಯಾಣಿಕರ ವಿಭಾಗದಲ್ಲಿ 3 ನೇ ಹಂತದ ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ ವಿಮಾನ ನಿಲ್ದಾಣವಾಗಿದೆ.