ಮಂಗಳೂರು, ನ. 29 (DaijiworldNews/AA): ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ಮಗಳೇ ತನ್ನ ತಾಯಿಗೆ ಮನಬಂದಂತೆ ಥಳಿಸಿ, ಚಪ್ಪಲಿಯಿಂದ ಹೊಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮೂಡುಶೆಡ್ಡೆಯ ಶಿವನಗರದಲ್ಲಿ ವಾಸಿಸುವ ತಾಯಿ ಮತ್ತು ಮಗಳ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ಈ ಹಿಂದೆ, ತಾಯಿ ಈ ವಿವಾದಗಳ ಕುರಿತು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ವಾಪಸ್ ಕಳುಹಿಸಿದ್ದರು.
ಇತ್ತೀಚೆಗೆ, ತಾಯಿ ತಮ್ಮ ಮಗಳ ವಿರುದ್ಧ ದೂರು ನೀಡಲು ಮೂಡುಶೆಡ್ಡೆ ಗ್ರಾಮ ಪಂಚಾಯತ್ಗೆ ಭೇಟಿ ನೀಡಲು ಪ್ರಾರಂಭಿಸಿದ್ದರು. ಮೂರು ದಿನಗಳ ಹಿಂದೆ, ತಾಯಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದೂರು ನೀಡುತ್ತಿದ್ದಾಗ, ಮಗಳು ಅವರನ್ನು ತಳ್ಳಿದ್ದಾಳೆ ಎಂದು ಆರೋಪಿಸಲಾಗಿದೆ. ಆಗ ತಾಯಿ ಸಹ ತಿರುಗೇಟು ನೀಡಿದ್ದಾರೆ. ಆದರೆ ಕೋಪಗೊಂಡ ಮಗಳು ನಂತರ ತನ್ನ ಚಪ್ಪಲಿಯಿಂದ ತಾಯಿಯ ಮುಖಕ್ಕೆ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾಳೆ. ಗ್ರಾಮ ಪಂಚಾಯತ್ನಲ್ಲಿ ಹಾಜರಿದ್ದವರು ರೆಕಾರ್ಡ್ ಮಾಡಿದ ಹಲ್ಲೆ ನಡೆಸಿರುವ ಈ ವಿಡಿಯೋ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಗ್ರಾಮ ಪಂಚಾಯತ್ನ ಕೆಲವು ಜನಪ್ರತಿನಿಧಿಗಳು ಮತ್ತು ಸಿಬ್ಬಂದಿ ಘಟನೆ ನಡೆದ ಸ್ಥಳದಲ್ಲಿ ಇರುವುದು ವಿಡಿಯೋದಲ್ಲಿ ಕಂಡುಬಂದಿದೆ. ಹಲ್ಲೆಯನ್ನು ತಡೆಯುವ ಬದಲು ಅಥವಾ ಪೊಲೀಸರಿಗೆ ಮಾಹಿತಿ ನೀಡುವ ಬದಲು ಕೇವಲ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಪೊಲೀಸರು ತಾಯಿ ಮತ್ತು ಮಗಳನ್ನು ವಿಚಾರಣೆಗೆ ಕರೆಸಿ, ಸಾರ್ವಜನಿಕವಾಗಿ ತಾಯಿಗೆ ಹಲ್ಲೆ ಮಾಡಿದ ಮಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಯಿ-ಮಗಳ ಜಗಳಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವಿಡಿಯೋವನ್ನು ರೆಕಾರ್ಡ್ ಮಾಡಿ, ಹೆಚ್ಚು ವೀವ್ಸ್ ಗಳಿಸುವ ಉದ್ದೇಶದಿಂದ ವಿಡಿಯೋವನ್ನು ಶೇರ್ ಮಾಡಿದವರ ವಿರುದ್ಧ ಯಾರಾದರೂ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.