ಕಾರ್ಕಳ, ನ. 28 (DaijiworldNews/AA): ಹೆಬ್ರಿ-ಕಾರ್ಕಳ ಗಡಿಯ ಪಡುಕುಡೂರು ಪ್ರದೇಶದ ತಿಮ್ಮಪ್ಪ ಪೂಜಾರಿ ಅವರ ಮನೆಯ ಬಳಿ ಆಹಾರ ಅರಸಿಕೊಂಡು ಬಂದಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು, ನಂತರ ಅದನ್ನು ಕಾಡಿಗೆ ಬಿಟ್ಟಿದ್ದಾರೆ.

ಮನೆಗೆ ಹೊಂದಿಕೊಂಡಿದ್ದ ಹೊರ ಭಾಗದ ಕೊಠಡಿಯ ಸಮೀಪದಲ್ಲಿ ಆಹಾರಕ್ಕಾಗಿ ಚಿರತೆ ಹೊಂಚು ಹಾಕಿ ಕುಳಿತಿತ್ತು. ಶಬ್ಧ ಗಮನಿಸಿ, ದೂರದಿಂದ ಚಿರತೆ ಇರುವುದನ್ನು ಗಮನಿಸಿದ ಮನೆಯವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇಲಾಖೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ಬೋನನ್ನು ಇಟ್ಟು ಕಾರ್ಯಾಚರಣೆ ಆರಂಭಿಸಿದರು. ಸುಮಾರು ಎರಡು ಗಂಟೆಗಳ ಕಾರ್ಯಾಚರಣೆಯ ನಂತರ, ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಡಲಾಯಿತು.
ಸೆರೆಹಿಡಿದ ಚಿರತೆ ಸುಮಾರು ಮೂರು ವರ್ಷ ವಯಸ್ಸಿನದ್ದಾಗಿದೆ ಎಂದು ಅಂದಾಜಿಸಲಾಗಿದೆ. ವೈದ್ಯಕೀಯ ತಪಾಸಣೆಯ ನಂತರ ಅದನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಈ ಕಾರ್ಯಾಚರಣೆಯಲ್ಲಿ ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪ ವಲಯ ಅರಣ್ಯಾಧಿಕಾರಿಗಳಾದ ಕರುಕರ ಆಚಾರ್ಯ, ಚಂದ್ರಕಾಂತ್ ಪೋಳ್, ರೋಹಿಣಿ, ಗಸ್ತು ಅರಣ್ಯಪಾಲಕರು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.