ಉಡುಪಿ, ನ. 28 (DaijiworldNews/ TA): ಭಯೋತ್ಪಾದಕ ದಾಳಿಯ ನಂತರ ಪ್ರತಿಕ್ರಿಯಿಸಲು ಹಿಂದಿನ ಸರ್ಕಾರಗಳು ಹಿಂಜರಿಯುತ್ತಿದ್ದರೂ, ನವ ಭಾರತ ಯಾರದ್ದೇ ಒತ್ತಡಕ್ಕೆ ತಲೆಬಾಗದೆ ತನ್ನ ಜನರ ರಕ್ಷಣೆಗೆ ಬಲವಾಗಿ ನಿಂತುಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸ್ಪಷ್ಟಪಡಿಸಿದರು. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ ಭವ್ಯ “ಲಕ್ಷ ಕಂಠ ಗೀತಾ ಪಾರಾಯಣ” ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಭಗವದ್ಗೀತೆಯ ತತ್ತ್ವಗಳನ್ನು ಉಲ್ಲೇಖಿಸುತ್ತಾ, “ಗೀತೆ ನಮಗೆ ಶಾಂತಿ, ಸತ್ಯ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯ ಕಲಿಸುತ್ತದೆ. ವಸುಧೈವ ಕುಟುಂಬಕಂ ಎನ್ನುವ ವಿಶ್ವಕುಟುಂಬದ ಕಲ್ಪನೆ ನಮ್ಮದು. ಆದರೆ ಧರ್ಮವನ್ನು ರಕ್ಷಿಸುವುದೇ ರಾಷ್ಟ್ರ ಭದ್ರತೆ,” ಎಂದು ಮೋದಿ ಹೇಳಿದರು. ಈ ವರ್ಷದ ಏಪ್ರಿಲ್ನಲ್ಲಿ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ, ಅವರಲ್ಲೂ ಪ್ರವಾಸಿಗರು ಸೇರಿ, ಸಾವನ್ನಪ್ಪಿದ ಘಟನೆ ಪ್ರಸ್ತಾಪಿಸಿ, ಬಲಿಯಾದವರಲ್ಲಿ ಕರ್ನಾಟಕದವರೂ ಇದ್ದಾರೆ ಎಂದು ಪ್ರಧಾನಿ ನೆನಪಿಸಿದರು.
ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ ನಡೆದ ಆಪರೇಷನ್ ಸಿಂಧೂರ್ ಬಗ್ಗೆ ಉಲ್ಲೇಖಿಸುತ್ತಾ, “ನಿಖರ ದಾಳಿಗಳ ಮೂಲಕ ಭಾರತದ ಸೇನೆ ರಾಷ್ಟ್ರದ ಸಂಕಲ್ಪವನ್ನು ಜಗತ್ತಿಗೆ ತೋರಿಸಿತು,” ಎಂದು ಹೇಳಿದರು. “ಕೆಂಪುಕೋಟೆಯಿಂದ ಕೃಷ್ಣನ ಕರುಣೆಯ ಸಂದೇಶವನ್ನೂ ಕೊಡುತ್ತೇವೆ, ಹಾಗೆಯೇ ಅಗತ್ಯವಿದ್ದಾಗ ಮಿಷನ್ ಸುದರ್ಶನ ಚಕ್ರದಂತಹ ಭದ್ರತಾ ಕ್ರಮಗಳನ್ನು ಘೋಷಿಸುವುದಕ್ಕೂ ಹೆದರುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಉಡುಪಿಯ ಆಡಳಿತ ಮಾದರಿ ಐದು ದಶಕಗಳ ಹಿಂದೆ ದೇಶಕ್ಕೆ ಹೊಸ ಮಾರ್ಗದರ್ಶನ ನೀಡಿತ್ತು, ಅದು ಇಂದು ಸ್ವಚ್ಛತೆ ಮತ್ತು ನೀರು ಪೂರೈಕೆಯ ರಾಷ್ಟ್ರೀಯ ನೀತಿಗಳನ್ನು ಪ್ರೇರೇಪಿಸಿದೆ ಎಂದು ಮೋದಿ ಹೊಗಳಿದರು. ರಾಮ ಜನ್ಮಭೂಮಿ ಚಳುವಳಿಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರ ಪಾತ್ರವನ್ನು ನೆನೆದು, ಅವರ ಮಾರ್ಗದರ್ಶನವೇ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು ಎಂದರು.
“ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸರ್ವಜನ ಹಿತಾಯ, ಈ ಘೋಷಣೆಗಳು ಗೀತೆಯ ಮೌಲ್ಯಗಳಿಂದಲೇ ಬಂದವು,” ಎಂದು ಮೋದಿ ಹೇಳಿದರು. ಬಡವರಿಗಾಗಿ ಆಯುಷ್ಮಾನ್ ಭಾರತ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮುಂತಾದ ಯೋಜನೆಗಳ ಜಾರಿಗೂ ಗೀತೆಯ ಬೋಧನೆಗಳೇ ಆಧಾರ ಎಂದು ಅವರು ಹೇಳಿದರು. ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಬಗ್ಗೆ ಮಾತನಾಡುತ್ತಾ, “ಗೀತೆಯ ಪಾಠವೇ ನಮ್ಮನ್ನು ನಾರಿ ಶಕ್ತಿ ವಂದನ ಅಧಿನಿಯಮ (ಮಹಿಳಾ ಮೀಸಲಾತಿ ಕಾಯ್ದೆ) ರೂಪಿಸಲು ಪ್ರೇರೇಪಿಸಿತು,” ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ಪ್ರಧಾನಿ ಮೋದಿ ಐತಿಹಾಸಿಕ ಕನಕ ಮಂಟಪಕ್ಕೆ ಭೇಟಿ ನೀಡಿ ಸಂತ ಕೀರ್ತನಕಾರ ಕನಕದಾಸರನ್ನು ಸ್ಮರಿಸಿದರು. ಶ್ರೀ ಕೃಷ್ಣನ ದರ್ಶನ ಪಡೆದ ನಂತರ ಮಠಾಧೀಶರಿಂದ ಸಾಂಪ್ರದಾಯಿಕ ಗೌರವಗಳನ್ನು ಸ್ವೀಕರಿಸಿದರು. ಮಠದ ಆವರಣದಲ್ಲಿ ಅವರಿಗೆ ಪೂರಣಕುಂಭ ಸ್ವಾಗತ ನೀಡಲಾಯಿತು. 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಮೋದಿ ಇದೇ ಮಠಕ್ಕೆ ಭೇಟಿ ನೀಡಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಬಂದ ಪ್ರಧಾನಿ, ನಂತರ ಉಡುಪಿ ಪಟ್ಟಣದಲ್ಲಿ ಅದ್ಧೂರಿ ರೋಡ್ ಶೋ ನಡೆಸಿದರು. ಜನರೂ ಹೂವಿನ ಸುರಿಮಳೆಯ ಮೂಲಕ ಸ್ವಾಗತಿಸಿದರು. ಕರಾವಳಿ ಕರ್ನಾಟಕದ ಸಂಪ್ರದಾಯಗಳನ್ನು ಪ್ರತಿನಿಧಿಸುವ ನೃತ್ಯ-ಸಂಗೀತ ಪ್ರದರ್ಶನಗಳು ಹಬ್ಬದ ವಾತಾವರಣವನ್ನು ನಿರ್ಮಿಸಿದವು.