ವಿಟ್ಲ, ನ. 28 (DaijiworldNews/ TA): ಆಧ್ಯಾತ್ಮಿಕ ಬೆಳಕು, ವಿಶ್ವಕ್ಕೆ ಬೆಳಕು ನೀಡುತ್ತದೆ. ಆಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮವಾಗಿ ಬದುಕು ನಡೆಸಬಹುದು. ಒಳಗಿನ ಅಂದಕಾರವನ್ನು ದೂರವಾಗಿಸಲು, ಆತ್ಮಜ್ಯೋತಿಯನ್ನು ಬೆಳಗಿಸುವ ಕಾರ್ಯವಾಗಬೇಕು ಎಂದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀದತ್ತ ಜಯಂತಿ ಮಹೋತ್ಸವ, ಶ್ರೀದತ್ತ ಮಹಾಯಾಗ ಸಪ್ತಾಹ, ಶ್ರೀದತ್ತ ಕೋಟಿ ನಾಮಜಪಯಜ್ಞ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಮನಸ್ಸನ್ನು ಕಲುಷಿತಗೊಳಿಸುವ ಕಾರ್ಯ ಮೊಬೈಲ್ ನಿಂದಾಗುತ್ತಿದ್ದು, ಅದರಿಂದ ಹೊರ ಬರುವುದಕ್ಕೆ ಕೋಟಿ ನಾಮ ಜಪವನ್ನು ಹಮ್ಮಿಕೊಳ್ಳಲಾಗಿದೆ. ಸಾತ್ವಿಕ ಭಾವದಲ್ಲಿ ನಡೆಸುವ ಜಪದಿಂದ ಪರಿಣಾಮವನ್ನು ಕಾಣಬಹುದು. ಸೇವೆಯೇ ಸಾಧನೆಯಾದಾಗ ಬದುಕು ಸುಂದರವಾಗುತ್ತದೆ. ಜನ ಮರಣದ ನಡುವಿನ ಜೀವನ ಸಾಮರಸ್ಯದಿಂದ ಕೂಡಿರಬೇಕು ಎಂದರು.
ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ೨೦೨೬ ಕ್ಯಾಲೆಂಡರಿನ ಬಿಡುಗಡೆ ನಡೆಯಿತು. ದೀಪಾರಾಧನೆ, ಶ್ರೀಗಣಪತಿ ಹವನ, ಶ್ರೀದತ್ತ ಮಹಾಯಾಗ ಸಪ್ತಾಹ ಆರಂಭ, ಶ್ರೀ ಗುರುದೇವಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀ ದತ್ತಮಾಲಾಧಾರಣೆ, ಶ್ರೀದತ್ತ ಕೋಟಿ ನಾಮ ಜಪಯಜ್ಞಕ್ಕೆ ಚಾಲನೆ, ಸಂಜೆ ಶ್ರೀದತ್ತಾಂಜನೇಯ ದೇವರ ಪಲ್ಲಕಿ ಉತ್ಸವ ನಡೆಯಲಿದೆ.
ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯವಹಿಸಿದ್ದರು. ಉದ್ಯಮಿಗಳಾದ ವಾಮಯ್ಯ ಬಿ. ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ, ಉಷಾ ಕುಮಾರ್ ಶೆಟ್ಟಿ, ಕಲ್ಪನಾ ಕೃಷ್ಣ ಶೆಟ್ಟಿ, ಸಮಿತಿಯ ಅಧ್ಯಕ್ಷ ಎ. ಸುರೇಶ್ ರೈ, ಕೋಶಾಧಿಕಾರಿ ಲೋಕನಾಥ ಜಿ. ಶೆಟ್ಟಿ, ಉಪಾಧ್ಯಕ್ಷ ಕಾನ ಈಶ್ವರ ಭಟ್ ಮತ್ತಿರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮಾತೇಶ್ ಭಂಡಾರಿ ಸ್ವಾಗತಿಸಿದರು. ಯಶವಂತ ವಿಟ್ಲ ವಂದಿಸಿದರು.