ಉಡುಪಿ, ನ. 28 (DaijiworldNews/ TA): ಶ್ರೀಕೃಷ್ಣ ಮಠದಲ್ಲಿ ನಡೆದ ಲಕ್ಷಕಂಠ ಭಗವದ್ಗೀತೆ ಪಾರಾಯಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಪರ್ಯಾಯ ಮಠಾಧೀಶರು ಸ್ವಾಮೀಜಿಗಳು ಪ್ರಧಾನಿಯನ್ನು ಸಂಸ್ಕೃತದಲ್ಲಿ ಹಾಡಿ ಹೊಗಳಿದರು. ಜೊತೆಗೆ ಬಿರುದೊಂದನ್ನು ಮೋದಿಗೆ ನೀಡಿದರು.

ಸ್ವಾಮೀಜಿಗಳು ವಿಶೇಷವಾಗಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಹಾಗೂ ಧರ್ಮ ರಕ್ಷಣೆಗೆ ಪ್ರಧಾನಿ ಮೋದಿ ನೀಡಿದ ಕೊಡುಗೆಗಳನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ‘ಭಾರತ ಭಾಗ್ಯವಿದಾತ’ ಎಂಬ ಬಿರುದು ಸಮರ್ಪಣೆ ಮಾಡಲಾಯಿತು. ಜೊತೆಗೆ ರಾಷ್ಟ್ರ ರಕ್ಷಣೆಯ ಕವಚ ಮತ್ತು ಶ್ರೀಕೃಷ್ಣನ ಫೋಟೋ ನೀಡಿ ಪ್ರಧಾನಿಯನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ಪ್ರಧಾನಿಯವರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಭೈರತಿ ಸುರೇಶ್, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ವಿ.ಸುನೀಲ್ ಕುಮಾರ್, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಮತ್ತು ಗುರುರಾಜ್ ಗಂಟಿಹೊಳೆ ಉಪಸ್ಥಿತರಿದ್ದರು. ಕಾರ್ಯಕ್ರಮವು ಭಕ್ತಿಭಾವದಿಂದ ತುಂಬಿದ ಪರಿಪೂರ್ಣ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿತ್ತು.